ವೀರಗಾಸೆ
ವೀರಗಾಸೆ ಕರ್ನಾಟಕದ ಜನಪ್ರಿಯ ಜಾನಪದ ನೃತ್ಯವಾಗಿದೆ. ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಪೌರಾಣಿಕ ಹಿನ್ನಲೆಯ ಜಾನಪದ ಕಲೆ. ಇಬ್ಬರಿಂದ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುತ್ತಾರೆ. ಪಂಚವಾದ್ಯಗಳಾದ ತಾಳ, ಶ್ರುತಿ, ಚಮಾಳ, ಓಲಗ, ಕರಡೆ ಬಳಕೆಯಾಗುತ್ತವೆ. ಕರಡಿ ಕುಣಿತದಲ್ಲಿ ಅವಶ್ಯಕ ವಾದ್ಯ ಎನಿಸಿದೆ. ಇದು ದಕ್ಷಯಜ್ಞದ ಸಮಯದಲ್ಲಿ ವೀರಭದ್ರನ ಸಾಂಕೇತಿಕ ಪ್ರಸ್ತುತಿಯಾಗಿದೆ. ಇದರ ಪ್ರತಿಪಾದಕರನ್ನು ಲಿಂಗದೇವರು ಎಂದು ಕರೆಯಲಾಗುತ್ತದೆ. ಅವರು ಹಬ್ಬದ ಸಮಯದಲ್ಲಿ ವಿಶೇಷವಾಗಿ ಶ್ರಾವಣ ಮತ್ತು ಕಾರ್ತಿಕ ತಿಂಗಳುಗಳಲ್ಲಿ ಧಾರ್ಮಿಕ ಉತ್ಸಾಹದಿಂದ ನೃತ್ಯವನ್ನು ಪ್ರದರ್ಶಿಸುತ್ತಾರೆ. ಬಲಗೈಯಲ್ಲಿ ಹೊರತೆಗೆದ ಕತ್ತಿ ಮತ್ತು ಎಡಗೈಯಲ್ಲಿ ವೀರಭದ್ರನ ಮರದ ಫಲಕವನ್ನು ಹಿಡಿದು ನರ್ತಕರು ಕರಡಿ ಮತ್ತು ಊಸರವಳ್ಳಿಯ ತಾಳಕ್ಕೆ ಸಮರ ನೃತ್ಯವನ್ನು ಮಾಡುತ್ತಾರೆ. ವೀರಗಾಸೆ ಮದುವೆ ಸಮಾರಂಭಗಳಲ್ಲಿ ವಿಶೇಷವಾಗಿದೆ.
ಪೌರಾಣಿಕ ಹಿನ್ನೆಲೆ
ಪೌರಾಣಿಕ ಕಥೆಯನ್ನು ಆಧಾರಿಸಿದ ಈ ವೀರಗಾಸೆ ಕುಣಿತವು ದಕ್ಷಬ್ರಹ್ಮ ಮತ್ತು ಈಶ್ವರನಿಗೆ ಸೇರಿದ ಒಂದು ಸುಂದರ ಕಥನವಾಗಿದೆ. ಒಮ್ಮೆ ದಕ್ಷಬ್ರಹ್ಮನೂ ಒಂದು ಯಜ್ಞವನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಾಗ ತನ್ನ ಮಗಳನ್ನು ಮತ್ತು ಅಳಿಯನನ್ನು ಕರೆಯುವುದಿಲ್ಲದಿರುವಾಗ ನಡೆಯುವ ಒಂದು ಘಟನಾವಾಳಿಯ ಚಿತ್ರಣ.
ದಕ್ಷಬ್ರಹ್ಮನಿಗೂ ಅವನ ಅಳಿಯನಾದ ಈಶ್ವರನಿಗೂ ವೈರತ್ವ ಬಂದು ದಕ್ಷಬ್ರಹ್ಮನು ತಾನು ಮಾಡುವ ಯಾಗಕ್ಕೆ ಈಶ್ವರನನ್ನು ಬಿಟ್ಟು ಉಳಿದ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ಯಜ್ಞದಲ್ಲಿ ಈಶ್ವರನಿಗೆ ನ್ಯಾಯವಾಗಿ ಸಲ್ಲಬೇಕಾದ ಆವಿರ್ಭಾಗವನ್ನು ಕೊಡದೆ ತಿರಸ್ಕರಿಸುತ್ತಾನೆ. ಈಶ್ವರನು ಬೇಡವೆಂದರೂ ತಂದೆ ಮಾಡುವ ಯಾಗದಲ್ಲಿ ಭಾಗವಹಿಸಲು ಪಾರ್ವತಿ ಬರುತ್ತಾಳೆ. ದಕ್ಷಬ್ರಹ್ಮ ಅಳಿಯನ ಮೇಲಿನ ಕೋಪದಿಂದ, ಮಗಳೆಂಬ ಮಮತೆಯನ್ನೂ ತೊರೆದು, ಕಂಡೂ ಕಾಣದಂತೆ ತಿರಸ್ಕಾರವಾಗಿ ಕಾಣುತ್ತಾನೆ. ಅವಳೆದುರಿಗೆ ಈಶ್ವರನನ್ನು ನಿಂದಿಸುತ್ತಾನೆ. ಇದನ್ನು ಕೇಳಿದ ಪಾರ್ವತಿ ಸಹಿಸಲಾಗದೆ, ಪತಿನಿಂದೆಯನ್ನು ಹೊತ್ತು ಕೈಲಾಸಕ್ಕೆ ಹಿಂದಿರುಗಲಾಗದೆ ಅಗ್ನಿಕೊಂಡ ಹಾಳಾಗಿ ಹೋಗಲಿ, ನಿನ್ನ ಹೆಣ್ಣು ಮಕ್ಕಳು ಮುಂಡೆಯರಾಗಲಿ, ಆಗಸ ತೂಕದ ಚಿನ್ನವಿಲ್ಲದಂತಾಗಲಿ, ಭೂಮಿ ತೂಕದ ಬೆಳ್ಳಿಯಿಲ್ಲದಂತಾಗಲಿ ಎಂದು ತಂದೆಗೆ ಶಾಪವನ್ನು ಕೊಟ್ಟು ಅಗ್ನಿಕುಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಗ ಇದೆಲ್ಲವನ್ನೂ ಏಕದೃಷ್ಟಿಯಿಂದ ಗಮನಿಸಿದ ಈಶ್ವರನು ಉಗ್ರವಾಗಿ ತಾಂಡವ ನೃತ್ಯವನ್ನು ಮಾಡುವಾಗ ಹಣೆಯ ಮೇಲೆ ಬಂದ ಬೆವರಿನ ಹನಿಗಳನ್ನು ಸೆಳೆದು ತೆಗೆದು ನೆಲಕ್ಕೆ ಅಪ್ಪಳಿಸುತ್ತಾನೆ.
ನೂರೊಂದು ಆಯುಧಗಳನ್ನು ಧರಿಸಿದಂತಹ ವೀರಭದ್ರನ ಜನನವಾಗುತ್ತದೆ. ಆಗ ಸಪ್ತ ಸಮುದ್ರಗಳು ಬತ್ತಿಹೋದವು. ಹುಟ್ಟಿದ ಮರುಕ್ಷಣದಲ್ಲಿಯೇ ವೀರಭದ್ರನು ಲೋಕವನ್ನೇ ಬಿಲ್ಲು ಮಾಡಿಕೊಂಡು, ಭೂಮಿಯನ್ನೇ ಬಾಣವನ್ನಾಗಿ ಮಾಡಿಕೊಂಡು, ತಂದೆಯೇ ನಮಗೆ ವೈರಿ ಯಾರು? ಎಂದು ಕೇಳುತ್ತಾನೆ. ಅದಕ್ಕೆ ಶಿವನು ದಕ್ಷಬ್ರಹ್ಮನೆಂದು ಹೇಳಿ ಅವನದು ಮುನ್ನೂರ ಅರವತ್ತು ಗಾವುದ ಪಟ್ಟಣ, ಅದಕ್ಕೆ ಮುನ್ನೂರ ಅರವತ್ತು ಬಾಗಿಲು, ಒಂದೊಂದು ಬಾಗಿಲಿಗೂ ಒಬ್ಬೊಬ್ಬ ರಾಕ್ಷಸರು ಕಾವಲಿರುತ್ತಾರೆ. ಆ ರಾಕ್ಷಸರ ಒಂದೊಂದು ತೊಟ್ಟು ರಕ್ತ ಬಿದ್ದರೆ ಒಂದು ಕೋಟಿ ರಾಕ್ಷಸರು ಜನಿಸುತ್ತಾರೆ ಎಂದು ಹೇಳಿ ಅವನ ಹಿಂದೆಯೇ ಜನಿಸಿದ ಚೌಡೇಶ್ವರಿಯನ್ನು ಸಹಾಯಕ್ಕಾಗಿ ಕಳುಹಿಸಿ ಕೊಡುತ್ತಾನೆ.
ವೀರಭದ್ರನು ರಾಕ್ಷಸರನ್ನು ಸಂಹರಿಸಿದ ನಂತರ ದಕ್ಷಬ್ರಹ್ಮನ ಯಾಗ ಶಾಲೆಗೆ ಹೋಗಿ ಅವನ ತಲೆಯನ್ನು ಚಂಡಾಡುತ್ತಾನೆ. ತಲೆ ಅಗ್ನಿಕುಂಡಕ್ಕೆ ಬಿದ್ದು ಸುಟ್ಟು ಕರಿಕಾಗುತ್ತದೆ. ಇದನ್ನು ಕಂಡ ದಕ್ಷಬ್ರಹ್ಮನ ಮಡದಿಯು ವೀರಭದ್ರನಿಗೆ ಆರತಿ ಬೆಳಗಿ ಪತಿಭಿಕ್ಷೆಯನ್ನು ಬೇಡುತ್ತಾಳೆ. ಶಿವನು ಯುದ್ಧಕ್ಕೆ ಕಳುಹಿಸುವಾಗ ಶರಣು ಹೊಕ್ಕವರನ್ನು ಕಾಯಿ ಎಂದು ಹೇಳಿದ್ದನ್ನು ನೆನದುಕೊಂಡು, ಅವನಿಗೆ ಪ್ರಾಣದಾನ ಮಾಡಲು ರುಂಡವಿಲ್ಲದಿರುವುದನ್ನು ಗಮನಿಸಿ, ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿರುವ ಯಾವುದಾದರೂ ಪ್ರಾಣಿಯ ತಲೆಯನ್ನು ಕತ್ತರಿಸಿ ತನ್ನಿ ಎಂದು ಹೇಳಿ ಕಳುಹಿಸುತ್ತಾನೆ.
ದಾರಿಯಲ್ಲಿ ಉತ್ತರ ದಿಕ್ಕಿಗೆ ತಲೆ ಹಾಕಿ ಒಂದು ಟಗರು ಮಲಗಿರುತ್ತದೆ. ಅದರ ರುಂಡವನ್ನೇ ಕತ್ತರಿಸಿ ತರುತ್ತಾರೆ. ಅದನ್ನೇ ದಕ್ಷನ ಮುಂಡಕ್ಕೆ ಜೋಡಿಸಿ ಪ್ರಾಣದಾನ ಮಾಡುತ್ತಾನೆ. ಈ ಸಂದರ್ಭದಲ್ಲಿ ವೀರಭದ್ರನು ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಹಿಂದಿನ ಕಥೆಯಾಗಿದೆ, ಅಂದಿನಿಂದಲೇ ಈ ಕಲೆ ಬೆಳೆದು ಬಂದಿತೆಂದೂ ಕಲಾವಿದರು ಹೇಳುತ್ತಾರೆ.
ಲಿಂಗದ ವೀರರನ್ನು ಊರಿಗೆ ಕರೆಸಿ ವೀರಭದ್ರನ ಪ್ರತಾಪದ ಬಗ್ಗೆ ಖಡ್ಗ ಹೇಳಿಸಿ ಕಥೆ ಕೇಳುವುದರಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆಂದೂ ದನಕರುಗಳಿಗೆ ರೋಗರುಜಿನಗಳಿದ್ದರೆ ಅವು ನಿವಾರಣೆಯಾಗುತ್ತವೆಂದೂ ನಂಬಿಕೆಯಿದೆ. ಕಲಾವಿದರಲ್ಲಿಯೂ ಈ ಕಲೆಯನ್ನು ಬಿಟ್ಟರೆ ತಮಗೆ ದರಿದ್ರ ಬರುತ್ತದೆ ಎಂಬ ಭಾವನೆ ಇದೆ. ಕಲಾವಿದರು ಎಷ್ಟೇ ಶ್ರೀಮಂತರಾಗಿದ್ದರೂ ಶಿವರಾತ್ರಿ, ಯುಗಾದಿ ಹಬ್ಬದಂದು ಕಾವಿ ಧರಿಸಿ ಮೂರು ಮನೆಗಾದರೂ ಕ್ವಾರಣ್ಯಕ್ಕೆ ಹೋಗಬೇಕು. ಇವರನ್ನು ವೀರಭದ್ರನ ಅವತಾರವೆಂದೇ ಭಾವಿಸಿರುವ ಗ್ರಾಮೀಣರು ಎಂದೂ ಬರಿಗೈಯಲ್ಲಿ ಕಳುಹಿಸದೆ ಭಿಕ್ಷೆ ನೀಡಿ ನಮಸ್ಕರಿಸುತ್ತಾರೆ.
ಆಚರಣೆಯ ವಿಧಾನ
ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಜಾತ್ರೆ ಉತ್ಸವಗಳಲ್ಲಿ, ದೇವರ ಮೆರವಣಿಗೆ, ಹುಣ್ಣೆಮೆ, ವೀರ ಹಾಲುಮತಸ್ಥರ ಮದುವೆ, ಗೃಹ ಪ್ರವೇಶ, ಕಾರ್ತೀಕ ಶ್ರಾವಣ ಸೋಮವಾರಗಳಲ್ಲಿ ಕಲಾವಿದರು (ಇವರಿಗೆ ಲಿಂಗದ ವೀರರು ಎಂದು ಹೇಳುತ್ತಾರೆ) ತಪ್ಪದೆ ಕಲೆಯನ್ನು ಪ್ರದರ್ಶಿಸುತ್ತಾರೆ. ವೀರಶೈವರಲ್ಲಿ ವೀರಭದ್ರನನ್ನು ಮನೆ ದೇವರಾಗಿ ನಂಬುವವರು ವೀರಗಾಸೆ ಮಾಡಿದಾಗ ಅದನ್ನು 'ಆಡಣಿ' ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯ ವೈಶಿಷ್ಠ್ಯ ಪೂರ್ಣವಾದ ಆಚರಣೆಯೇ ಆಗಿರುತ್ತದೆ. ಸಾಮಾನ್ಯವಾಗಿ ವೀರಭದ್ರ ದೇವರ ಒಕ್ಕಲಿನವರು ತಮ್ಮ ಹಿರಿಯ ಮಗನ ಮದುವೆಯಲ್ಲಿ ಮಾತ್ರ ವೀರಗಾಸೆಯನ್ನು ಮಾಡುತ್ತಾರೆ. ಆ ದಿವಸ ಐದು ಜನ ಮುತ್ತೈದೆಯರು ಮತ್ತು ಐದು ಜನ ಗಂಡು ಮಕ್ಕಳು ಉಪವಾಸವಿರುತ್ತಾರೆ. ಆ ದಿವಸ ಐದು ಜನ ಹೆಣ್ಣು ಮಕ್ಕಳಿಗೆ ಮತ್ತು ಗಂಡಸರಿಗೆ ಶಸ್ತ್ರ ಹಾಕುತ್ತಾರೆ. ಇದರ ಮೇಲೆ ಮದುಮಗ ಹಾಗೂ ಮುತ್ತೈದೆಯರು ಕೊಂಬಿ ದೇವರನ್ನು ತೆಗೆದುಕೊಂಡು ನಡೆಯುತ್ತಿರುತ್ತಾರೆ. ಹಾಗೆ ಹೋಗುವಾಗ ವೀರಭದ್ರ ದೇವರ ಹಾಗೂ ಹಲವು ದೇವರುಗಳ ಒಡಬುಗಳನ್ನು ಹೇಳುತ್ತಾರೆ. ದೇವಸ್ಥಾನ ಮುಂಭಾಗದಲ್ಲಿ ಒಂದು ಅಡಿ ಆಳ. ಒಂದು ಅಡಿ ಉದ್ದ ಹಾಗೂ ಎರಡು ಅಡಿ ಅಗಲದ ಗುಂಡಿಯನ್ನು ತೆಗೆದು ಅತ್ತಿ, ಆಲ, ಶ್ರೀಗಂಧ ಮರದ (ಈಗ ಗಂಧದ ಮರ ಇರುವುದಿಲ್ಲ) ಹತ್ತು ಹೊರೆ ಕಟ್ಟಿಗೆಗಳನ್ನು ಗುಂಡಿಗೆ ಹಾಕಿ ವೀರಗಾಸೆಯವರಿಂದ ಬೆಂಕಿಯನ್ನು ಹಚ್ಚಿಸುತ್ತಾರೆ, ಈ ಯಜ್ಞಕುಂಡದಲ್ಲಿ ಹಾಲುಕ್ಕಿಸಿ ಎಡೆಕೊಡುತ್ತಾರೆ. ಸ್ವಾಮಿಗಳು, ಪುರವಂತರು, ಮದುಮಕ್ಕಳು, ಮುತ್ತೈದೆಯರು ಯಜ್ಞಕುಂಡವನ್ನು ಹಾಯ‍್ದು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಕೊಂಬಿ ದೇವರು ಈ ಆಚರಣೆಯಲ್ಲಿ ಬಹುಮುಖ್ಯವಾದುದು. ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ತಾಳ, ಶ್ರುತಿ, ಚಮಾಳ (ಸಮ್ಮೇಳ ಸಂಬಾಳ), ಓಲಗ ಅಥವಾ ಮೌರಿ, ಕರಡೆವಾದ್ಯ ಈ ಪಂಚವಾದ್ಯಗಳು ಇಲ್ಲಿ ಬಳಕೆಯಾಗುತ್ತವೆ. ಕರಡೆ ಈ ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.
ವೇಷಭೂಷಣ
ವೀರಭದ್ರನ ಭವ್ಯವಾದ ಉಡುಗೆಯು ಆಕರ್ಷಕ ಮತ್ತು ನಾಟಕೀಯವಾಗಿದೆ. ನರ್ತಕಿ ಕೆಂಪು ಕೆ ಅಚೆ ಪಂಚೆ ಮತ್ತು ಕೆಂಪು ಜುಭಾ ಧರಿಸುತ್ತಾರೆ. ಪಂಚೆಯನ್ನು ಈಗ ಪೈಜಾಮಾ ಅಥವಾ ಸ್ಟ್ರಿಂಗ್ ಪ್ಯಾಂಟ್‌ಗಳಿಂದ ಬದಲಾಯಿಸಲಾಗಿದೆ. ಬಹು ಬಣ್ಣದ ಬಟ್ಟೆಯನ್ನು ಭುಜದಿಂದ ಹೊದಿಸಿ ಸೊಂಟದಲ್ಲಿಯೂ ಕಟ್ಟಲಾಗುತ್ತದೆ. ಅವನು ಪಾದಕ್ಕೆ ಜೋರಾಗಿ ಜಿಂಗಲ್ಸ್ ಧರಿಸುತ್ತಾನೆ ಮತ್ತು ಮೊಣಕಾಲಿನಲ್ಲಿ ' ಗಾಗ್ರ' ಅಥವಾ ಬೃಹತ್ ಹಿತ್ತಾಳೆಯ ಗಂಟೆಗಳನ್ನು ಬಿಗಿಯಾಗಿ ಸುತ್ತಿಕೊಳ್ಳಲಾಗುತ್ತದೆ. ದಕ್ಷನ ತಲೆಯನ್ನು ಚಿತ್ರಿಸುವ ಹಿತ್ತಾಳೆ ಮುಖವಾಡಗಳನ್ನು ಸೊಂಟದ ಮೇಲೆ ಧರಿಸಲಾಗುತ್ತದೆ ಮತ್ತು ಲಿಂಗ ಅಥವಾ ನಾಗ-ಅಭರಣ ಕುತ್ತಿಗೆಯನ್ನು ಅಲಂಕರಿಸುತ್ತದೆ. ಹಾವಿನ ತೋಳುಗಳು, ಮಣಿಕಟ್ಟಿನ ಪಟ್ಟಿಗಳು ಮತ್ತು ಪೆಂಡೆಂಟ್‌ಗಳು ಸಹ ಕಲಾವಿದನನ್ನು ಅಲಂಕರಿಸುತ್ತವೆ. ಶಿರಸ್ತ್ರಾಣವು ಚಿನ್ನದ ಬಣ್ಣ ಬಳಿದ ಕಿರೀಟವಾಗಿದ್ದು, ಅದರಿಂದ ದೊಡ್ಡ ಬಿಳಿ ವಿಗ್ ಹರಿಯುತ್ತದೆ. ಅವನು ದೊಡ್ಡ ಬಿಳಿ ಮೀಸೆಯನ್ನು ಸಹ ಹೊಂದಿದ್ದಾನೆ. ಕಾಡು ಮತ್ತು ಕೋಪಗೊಂಡ ನೋಟವನ್ನು ಸೃಷ್ಟಿಸಲು ಕಣ್ಣುಗಳನ್ನು ವಿವಿಧ ಬಣ್ಣಗಳಲ್ಲಿ ಚಿತ್ರಿಸಲಾಗಿದೆ. ಹಣೆಯನ್ನು ವಿಭೂತಿ ಮತ್ತು ಶಿವನನ್ನು ಚಿತ್ರಿಸಲು ಮೂರನೇ ಕಣ್ಣನ್ನು ಚಿತ್ರಿಸಲಾಗಿದೆ. ಅವನು ತನ್ನ ಬಲಗೈಯಲ್ಲಿ ಭವ್ಯವಾದ ಮತ್ತು ಹೊಳೆಯುವ ಕತ್ತಿಯನ್ನು ಮತ್ತು ಇನ್ನೊಂದು ಕೈಯಲ್ಲಿ ಗುರಾಣಿಯನ್ನು ಹೊಂದಿದ್ದಾನೆ. ಸಂಗೀತಗಾರರು ಸಾಮಾನ್ಯವಾಗಿ ಬಿಳಿ ಧೋತಿ ಮತ್ತು ಸರಳವಾದ ಸ್ಯಾಟಿನ್ ಅಥವಾ ಹತ್ತಿ ಜುಭಾವನ್ನು ಧರಿಸುತ್ತಾರೆ. ಅವರು ಪೇಟವನ್ನು ಧರಿಸುತ್ತಾರೆ ಮತ್ತು ಸೊಂಟಕ್ಕೆ ಬಟ್ಟೆಯನ್ನು ಕಟ್ಟುತ್ತಾರೆ.
ಪೌರಾಣಿಕ ಕಥೆ ಹೇಳುವ ಒಡಪುಗಳು
ವೀರಗಾಸೆಯ ಪ್ರಕಾರದಲ್ಲಿ ಹಿರಿಯ ಕಲಾವಿದರು ಗಂಡಕ್ಷರಗಳಿಂದ ಕೂಡಿದ ಕನ್ನಡದ ಗದ್ಯ ಸಾಹಿತ್ಯದ ನುಡಿಗಟ್ಟನ್ನು ಆವೇಶಭರಿತರಾಗಿ ನುಡಿಯುತ್ತಾರೆ, ಇಂತಹ ಆವೇಶಭರಿತ ನುಡಿಗಟ್ಟುಗಳನ್ನು 'ಒಡಪು' ಅಥವಾ 'ಒಡಬು' ಗಳೆಂದು ಕರೆಯಲಾಗಿದೆ. ಇಂತಹ ಒಡಪು ಅಥವಾ ಒಡಬು ಸಾಹಿತ್ಯ ಹೇಗಿರುತ್ತದೆ ಎಂದರೆ ಉದಾಹರಣೆಗೆ:- ಉಲ್ಲಾಸಭರಿತರಾಗಿ ಕುಳಿತಿರುವ ಎಲ್ಲಾ ಜನಗಳು ಸುಲಲಿತವಾಗಿ ಗುಲ್ಲುಮಾಡದೆ ನೀವು ಕೇಳಿರಿ, ಅಹಹ ರುದ್ರಾ ಅಹಹಾ ದೇವಾ........... ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ಈ ಕುಣಿತದಲ್ಲಿ ವೀರಭದ್ರನ ವರ್ಣನೆಯೇ ಪ್ರಧಾನವಾಗಿರುತ್ತದೆ. ವೀರಭದ್ರ ಹುಟ್ಟಿದ ಸಂದರ್ಭದ ಒಂದು ವರ್ಣನೆ ಹೀಗಿದೆ: "ವೀರಭದ್ರದೇವರು ಹುಟ್ಟಿದ ರೂಪೆಂತೆಂದೊಡೆ, ಹುಟ್ಟಿದಾಗಲೆ ಹೂವಿನಗಾಸೆ, ಮಂಜುಳಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನ್ನಾವಿಗೆ, ಸಾವಿರ ಶಿರ, ಮೂರು ಸಾವಿರ ನಯನ, ಎರಡು ಸಾವಿರ ಭುಜ, ಕೆಕ್ಕರಿಸಿದ ಕಣ್ಣು, ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರ ದೇವರು ಹೋಮದ ಕುಂಡದ ಬಳಿಗೆ ಹೇಗೆ ಬರುತ್ತಾರೆಂದರೆ.........." ಇಂತಹ ಒಡಪು-ಒಡಬುಗಳನ್ನು ಹೇಳಿದ ಬಳಿಕ ಸಮ್ಮಾಳದ (ಚರ್ಮ ವಾದ್ಯದ) ಹಾಗೂ ಕರಡೆಯ (ಚರ್ಮ ವಾದ್ಯ) ನುಡಿತಗಳು ಕಲಾವಿದರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರಾದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ ಕುಣಿತ, ಬಡಿತಗಳ ವೇಗ ಹೆಚ್ಚುತ್ತಾ ಹೋಗುತ್ತದೆ.
- ಲಕ್ಷ್ಮಿ ಎಸ್ . ಗುಡೆನ್ನವರ
ಬಿ. ಎ. ಸಿ. ಪಿ.

No comments:
Post a Comment