ಎಲ್ಲಮ್ಮನ ಜಾತ್ರೆಗೆ ಎಲ್ಲಿಲ್ಲದ ಸಡಗರ
ಸವದತ್ತಿಯ ರೇಣುಕಾ ದೇವಿ ದೇವಸ್ಥಾನವು ನಾಡಿನ
ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳ. ಪ್ರತೀ ಹುಣ್ಣಿಮೆಯಂದು ಎಲ್ಲಮ್ಮನ ಆರಾಧನೆ ಜಾತ್ರೆಯಂತೆ ನಡೆದರೂ
ಭರತ ಹುಣ್ಣಿಮೆಯಂದು ವಿಶೇಷವಾಗಿ ಒಂದು ತಿಂಗಳವರೆಗೆ ದೊಡ್ಡಜಾತ್ರೆ ನಡೆಯುತ್ತದೆ. ಸಂಕ್ರಾಂತಿಯ ತರುವಾಯ
ಒಂದರ ಹಿಂದೆ ಮತ್ತೊಂದರಂತೆ ಜಾತ್ರೆಗಳು ಸಾಲುಸಾಲಾಗಿ ಬರುತ್ತವೆ. ಅವುಗಳಲ್ಲಿ ಕೆಲವು ಒಂದೆರಡು ದಿನ
ನಡೆದರೆ ಕೆಲವು ಜಾತ್ರೆಗಳು ತಿಂಗಳುಗಟ್ಟಲೇ ನಡೆಯುತ್ತವೆ. ಅಂತಹ ಜಾತ್ರೆಗಳಲ್ಲಿ ಎಲ್ಲಮ್ಮನ ಜಾತ್ರೆಯೂ
ಒಂದು. ಮನೆಮಂದಿಯಲ್ಲ ಕೂಡಿ ಹೋಗುವ ಸಂಭ್ರಮ, ಬಂಡಿ ಕಟ್ಟುವ ಸಡಗರ, ಭಕ್ತರ ಪಾದಯಾತ್ರೆ, ‘ಉದೋ ಉದೋ’
ಎಂಬ ಭಕ್ತರ ದನಿ, ಪೀಪೀ ಊದುವ ಮಕ್ಕಳು, ಬಳೆಗಾಗಿ ಮುಗಿಬಿದ್ದ ಹೆಣ್ಣುಮಕ್ಕಳು, ಹಗ್ಗ-ಮಿಣಿ ಖರೀದಿಸುವ
ರೈತರು, ಲಂಗುಲಗಾಮಿಲ್ಲದೇ ತಿರುಗುವ ಯುವಕರು, ಭಂಡಾರದಿಂದ ಹಳದಿಗಟ್ಟಿದ ಗುಡಿಯ ಪರಿಸರ – ಹೀಗೆ ಜಾತ್ರೆಯ
ಸಡಗರ ಹೇಳುತ್ತ ಹೋದರೆ ಮುಗಿಯದು.
ಭೌಗೋಳಿಕ ಪರಿಸರ
ಸವದತ್ತಿಯು ಬೆಳಗಾವಿ ಜಿಲ್ಲೆಗೆ ಸೇರಿದ ತಾಲೂಕು
ಕೇಂದ್ರ. ಇದಕ್ಕೆ ೫ ಕಿ.ಮೀ. ದೂರದಲ್ಲಿರುವ ಯಾತ್ರಾಸ್ಥಳವೇ ಎಲ್ಲಮ್ಮನ ಗುಡ್ಡ. ಸುತ್ತಲೂ ಗುಡ್ಡಗಳಿಂದ
ಕೂಡಿರುವ "ಎಲ್ಲಮ್ಮನ ಗುಡ್ಡ" ಎಂದು ಕರೆಯಲ್ಪಡುವ ಬೆಟ್ಟಕ್ಕೆ ಸಿದ್ಧಾಚಲ ಪರ್ವತ ಎಂದು
ಹೆಸರಿತ್ತು. ರಾಮಗಿರಿ ಬೆಟ್ಟ ಶ್ರೇಣಿಯ ನಡುವೆ ಮಲಪ್ರಭಾ ನದಿಯು ಹರಿದಿದ್ದು ಈ ಭಾಗದ ಜೀವನದಿಯಾಗಿದೆ.
ಸಮೀಪದಲ್ಲಿರುವ ‘ರೇಣುಕಾ ಸಾಗರ’, ಮಲಪ್ರಭಾ ನದಿಗೆ ಆಣೆಕಟ್ಟು ಕಟ್ಟಿರುವ ನವಿಲುತೀರ್ಥ ಜಲಾಶಯ, ನವಿಲುತೀರ್ಥ
ಉದ್ಯಾನವನ ಮಳೆಗಾಲದಲ್ಲಿ ಉಂಟಾಗುವ ಝರಿಗಳು ಇವೆಲ್ಲವೂ ಸುತ್ತಲಿನ ಪ್ರಾಕೃತಿಕ ಸೌಂದರ್ಯದ ಕುರುಹಾಗಿವೆ.
ದೇವಾಲಯದ ಇತಿಹಾಸ
ಸುಮಾರು 8ನೇ ಶತಮಾನದ ಮಧ್ಯದಿಂದ
11ನೇ ಶತಮಾನದ ಮಧ್ಯಭಾಗದವರೆಗೆ ಆಳಿದ ರಾಷ್ಟ್ರಕೂಟರ ಅಥವಾ ಚಾಲುಕ್ಯರ ಅವಧಿಯ ಅಂತ್ಯದಲ್ಲಿ ರೇಣುಕಾ ದೇವಾಲಯವು ಇತ್ತೆಂದು ದೇವಾಲಯದ ಸುತ್ತಲೂ ದೊರೆತ ಪುರಾತತ್ತ್ವದ ಪುರಾವೆಗಳು ಹೇಳುತ್ತವೆ.
ಸಧ್ಯ ಈಗಿರುವ ದೇವಾಲಯವನ್ನು 1514ರಲ್ಲಿ ರಾಯಬಾಗದ ಬೋಮಪ್ಪ ನಾಯಕ ನಿರ್ಮಿಸಿದನು. ಈ ದೇವಾಲಯವನ್ನು ಚಾಲುಕ್ಯ
ಮತ್ತು ರಾಷ್ಟ್ರಕೂಟ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ. ಈ ಪ್ರದೇಶವನ್ನು ರಟ್ಟರು
ಆಳುತ್ತಿದ್ದ ಕಾರಣವೋ ಏನೋ ದೇವಾಲಯದಲ್ಲಿನ ಕೆತ್ತನೆಗಳು
ನೋಡಿದಾಗ ನಿಮಗೆ ಜೈನ ವಾಸ್ತುಶಿಲ್ಪವನ್ನು ನೋಡಿದ ಅನುಭವವಾಗುತ್ತದೆ. ಈ ದೇವಾಲಯದ ಆವರಣದಲ್ಲಿ ಗಣೇಶ, ಮಲ್ಲಿಕಾರ್ಜುನ, ಪರಶುರಾಮ, ಏಕನಾಥ, ಸಿದ್ದೇಶ್ವರ ದೇವಾಲಯಗಳಿವೆ.
ಪೌರಾಣಿಕ ಹಿನ್ನಲೆ
ಇದು ಜಮದಗ್ನಿಯ ಹೆಂಡತಿ ಮತ್ತು ಪರಶುರಾಮನ
ತಾಯಿಯಾದ ರೇಣುಕಾ ದೇವಿಗೆ ಸಂಬಂಧಿಸಿದ ಕಥೆಯನ್ನು ಮಹಾಭಾರತ, ಹರಿವಂಶ ಮತ್ತು ಭಾಗವತ ಪುರಾಣಗಳಲ್ಲಿ
ಹೇಳಲಾಗಿದೆ. ಇಲ್ಲಿ ರೇಣುಕಾ ದೇವಿಯನ್ನು ‘ಎಲ್ಲಮ್ಮ ದೇವಿ’ ಎನ್ನುವ ಹೆಸರಿನಿಂದ ಪೂಜಿಸಲಾಗುತ್ತದೆ.
ರೇಣುಕಾ ದೇವಿಯ ಕುರಿತ ಅನೇಕ ದಂತಕಥೆಗಳು ಜನಪದರಲ್ಲಿವೆ. ಜಮದಗ್ನಿ ಮತ್ತು ರೇಣುಕಾ ದೇವಿಯು ದೇಹತ್ಯಾಗ
ಮಾಡಿದ ಬಳಿಕ ದತ್ತಾತ್ರೇಯ ಮುನಿಗಳ ಆದೇಶದಂತೆ ಪರಶುರಾಮನು
ತನ್ನ ಬಾಣಗಳನ್ನು ಪ್ರಯೋಗಿಸಿ ಪವಿತ್ರ ಸಪ್ತಜಲಗಳನ್ನು ಒಂದೇ ಕುಂಡದಲ್ಲಿ ಉದ್ಭವಿಸಿ ಆ ಜಲದಿಂದ ತಂದೆ
ತಾಯಿಯ ಅಂತ್ಯಕ್ರಿಯೆ ನಡೆಸುತ್ತಾನೆ. ತದನಂತರ ರೇಣುಕಾದೇವಿಯು
ಮಗನಿಗೆ ಪ್ರತ್ಯಕ್ಷಳಾಗಿ ತಾನು ನೀಡಿದ ವಚನದಂತೆ ಏಳುಕೊಳ್ಳದಲ್ಲಿ ಉದ್ಭವವಾಗುತ್ತಾಳೆ. ಅದುವೇ ಎಣ್ಣೆ
ಹೊಂಡ. ಹೀಗೆ ತಾಯಿ ರೇಣುಕೆಯು ಕಲಿಯುಗದ ಕಲ್ಯಾಣಕ್ಕಾಗಿ ಏಳುಕೊಳ್ಳದಲ್ಲಿ ನೆಲೆಸಿದ್ದರಿಂದ ಈ
ಕ್ಷೇತ್ರವು ಒಂದು ಶಕ್ತಿ ಪೀಠವಾಯಿತು.
ಎಲ್ಲರ ಅಮ್ಮ
‘ಎಲ್ಲಮ್ಮ’
ಜಗನ್ಮಾತೆ ರೇಣುಕಾ ಎಲ್ಲಮ್ಮ ದೇವಿಯು ಎಲ್ಲ ಭಕ್ತರ ಮಾತೆ. ಅವಳು ಎಲ್ಲರಿಗೆ ಅಮ್ಮನಾಗಿ ಕಾಪಾಡುವದರಿಂದ “ಎಲ್ಲರ ಅಮ್ಮ ಎಲ್ಲಮ್ಮ”,
“ಏಳು ಕೊಳ್ಳದ ಅವ್ವ” ಅಂತಲೇ ಕರೆಯುತ್ತಾರೆ. ದಕ್ಷಿಣ ಭಾರತದ ಪ್ರಮುಖ ಶಕ್ತಿ ದೇವತೆ. ಭಕ್ತರ ಆರಾಧ್ಯ ದೇವತೆ. ಭಕ್ತರ ಕಾಮಧೇನುವಾಗಿ ಇಷ್ಟಾರ್ಥ ಸಿದ್ಧಿಗಳನ್ನು ನೀಡುವ ಕರುಣಾಮಯಿ. ಆಶ್ವಿಜ ಮಾಸದಲ್ಲಿ ಬರುವ ಸೀಗೆ ಹುಣ್ಣಿಮೆಯಿಂದ ಮಾಘಮಾಸದಲ್ಲಿಯ ಭರತ ಹುಣ್ಣಿಮೆಯವರೆಗೆ ಬರುವ ಐದು ಹುಣ್ಣಿಮೆಗಳಂದು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ರೇಣುಕಾ ದೇವಿಯ ದರ್ಶನಾಶೀರ್ವಾದ ಪಡೆದು ಪುನೀತರಾಗುತ್ತಾರೆ. ಅಲ್ಲದೇ ವರ್ಷವಿಡೀ ಬರುವ ಎಲ್ಲ ಹುಣ್ಣಿಮೆ, ಶುಕ್ರವಾರ, ಮಂಗಳವಾರ ಶ್ರೀ ದೇವಿಯ ದರ್ಶನಕ್ಕೆ ಸಹಸ್ರಾರು ಜನ ಭಕ್ತರು ಆಗಮಿಸುತ್ತಾರೆ.
ಪವಿತ್ರ ‘ಜೋಗುಳ ಭಾವಿ-ಎಣ್ಣೆ
ಹೊಂಡ
ನವಿಲತೀರ್ಥ ಅಣೆಕಟ್ಟಿನಿಂದ ರೂಪುಗೊಂಡ ರೇಣುಕಾಸಾಗರದಲ್ಲಿ ‘ಜೋಗುಳ ಭಾವಿ’ ಎಂಬ ಇನ್ನೊಂದು ಪವಿತ್ರ ಭಾವಿಯಿದೆ. ಯಾತ್ರಾರ್ಥಿಗಳು ಎಲ್ಲಮ್ಮ ಗುಡ್ಡಕ್ಕೆ ಭೇಟಿ ನೀಡುವ ಮೊದಲು ಇಲ್ಲಿ ಪವಿತ್ರ ಸ್ನಾನ ಮಾಡಿ ನಂತರ ಎಲ್ಲಮ್ಮ ತಾಯಿಯ ದರ್ಶನಕ್ಕೆ ಹೋಗುತ್ತಾರೆ. ಎಣ್ಣೆಹೊಂಡದಲ್ಲಿ ಯಾವಾಗಲೂ ನೀರು ಉದ್ಭವವಾಗುತ್ತದೆ.
ಆ ನೀರಿನ ಮೂಲ ಯಾವುದೆಂದು ಇಂದಿಗೂ ವಿಸ್ಮಯ. ಈಗಲೂ ಸಹಿತ
ಈ ಕ್ಷೇತ್ರದಲ್ಲಿ ಎಣ್ಣೆಹೊಂಡವೆಂಬ ತೀರ್ಥವು ‘ಪವಿತ್ರ ಜಲ’ವೆಂದು ಪ್ರಖ್ಯಾತಿ ಹೊಂದಿದೆ. ಭಕ್ತರು ಈ ನೀರನ್ನು ತಲೆಯ ಮೇಲೆ ಪ್ರೋಕ್ಷಣೆ
ಮಾಡಿಕೊಳ್ಳುತ್ತಾರೆ. ಈ ನೀರಿನಿಂದ ಚರ್ಮ ರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆಯಿದೆ.
ಸಾಲು ಬಂಡಿಗಳ ಸೊಗಸು
ಜಾತ್ರೆಗಳು ಬಂದರೆ ಸಾಕು ಸವದತ್ತಿ ಸುತ್ತಮುತ್ತಲಿನ
ಸುಮಾರು 50 ಕಿ.ಮೀ. ವ್ಯಾಪ್ತಿಯ ಗ್ರಾಮಗಳ ಭಕ್ತರು ಎತ್ತಿನ ಬಂಡಿ ಸಿಂಗರಿಸಿ ಅವುಗಳನ್ನು ಕಟ್ಟುವುದು ರೂಢಿ.
ಇದು ಒಂದು ರೀತಿಯ ಹರಕೆಯೂ ಹೌದು. ಇನ್ನೊಂದೆಡೆ ಪ್ರತಿಷ್ಠೆಯ ವಿಷಯವೂ ಹೌದು. ಇಂದಿಗೂ ಸಾಲು ಬಂಡಿಗಳು
ರಸ್ತೆ ಹಿಡಿದು ಹೊರಟರೆ ಎತ್ತಿನ ಕೊರಳ ಗಂಟೆಯ ನಾದ, ಬಂಡಿಯ ರಂಗುರಂಗಿನ ಅಲಂಕಾರ, ‘ಉದೋ ಉದೋ’ ಎನ್ನುತ್ತಲೇ ಸಾಗುವ ಭಕ್ತರು ಈ ದೃಶ್ಯಗಳು ನೋಡಲು ಬಲು ಸೊಗಸು. ಬಂಡಿಗಳಲ್ಲಿ
ಜಾತ್ರೆಯಲ್ಲಿ ತಂಗಲು ಸಾಮಗ್ರಿಗಳು, ಮಕ್ಕಳಿದ್ದರೆ ಅದರ ಹಿಂದೆ ಹಿರಿಯರು, ಯುವಕರು ಪಾದಯಾತ್ರೆ ಮಾಡುತ್ತಾರೆ. ವಾಹನಗಳ ಭರಾಟೆಯಲ್ಲಿಯೂ
ಈ ಬಂಡಿ ಕಟ್ಟುವ ಪರಂಪರೆಯು ಮಾಯವಾಗಿಲ್ಲ.
ದೂರದೂರುಗಳಿಂದ ಭಕ್ತರ ದಂಡು
‘ಯಲ್ಲಮ್ಮ ತನ್ನ ಶಕ್ತಿಯಿಂದಾಗಿ ಭಕ್ತರ ಇಚ್ಛೆಗಳನ್ನು ಈಡೇರಿಸುತ್ತಾಳೆ.
ದೇವಿಯ ಬಳಿ ಏನೇ ಬೇಡಿಕೊಂಡರು ಅದನ್ನು ನೆರವೇರಿಸುತ್ತಾಳೆ’
ಎನ್ನುವ ನಂಬಿಕೆ ಭಕ್ತರಲ್ಲಿದೆ. ಈ ಕಾರಣದಿಂದ ಯಲ್ಲಮ್ಮನ
ಗುಡ್ಡ ಜನಪ್ರಿಯ ಯಾತ್ರಾಸ್ಥಳ. ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ತಾಯಿಯ ದರ್ಶನಕ್ಕೆಂದು ಭೇಟಿ ನೀಡುತ್ತಾರೆ.
ವರ್ಷದ ಯಾವುದೇ ದಿನಗಳಲ್ಲಿ ಈ ದೇವಾಲಯಕ್ಕೆ ನೀವು ಭೇಟಿ ನೀಡಿದರೂ ಭಕ್ತರ ದಂಡನ್ನು ನೋಡಬಹುದು. ಪ್ರತಿ
ಹುಣ್ಣಿಮೆಗೆ ಜಾತ್ರೆಯಂತೆಯೇ ಜನ ಸೇರುತ್ತಾರೆ. ಅಲ್ಲದೇ ಭಾರತ ಹುಣ್ಣಿಮೆಯಂದು ನಡೆಯುವ ಜಾತ್ರೆಗೆ
ಹತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಇಲ್ಲಿ ಸೇರುತ್ತಾರೆ. ಈ ಜಾತ್ರೆಗೆ ಕರ್ನಾಟಕದವರಲ್ಲದೆ, ಆಂಧ್ರ,
ತೆಲಂಗಾಣ, ಗೋವಾ, ಮಹಾರಾಷ್ಟ್ರ ಓರಿಸ್ಸಾ ತಮಿಳುನಾಡು ಹಾಗೂ ಮಧ್ಯಪ್ರದೇಶಗಳಿಂದಲೂ ಬಹುಸಂಖ್ಯೆಯ ಭಕ್ತರು
ಬರುತ್ತಾರೆ.
ಇಷ್ಟಾರ್ಥಕ್ಕಾಗಿ ಹರಕೆಗಳು
ಭಕ್ತರು ತೆಂಗಿನಕಾಯಿ, ಬಾಳೆಹಣ್ಣು, ಕರ್ಪೂರ, ಎಣ್ಣೆ-ಬತ್ತಿ, ಹೂಮಾಲೆ ಇತ್ಯಾದಿಗಳೊಂದಿಗೆ ಶ್ರೀ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ಭಕ್ತಾಧಿಗಳು ಈ ಮೊದಲು ತಾವು ಹೊತ್ತ ಹರಕೆಯು ಫಲ ನೀಡಿದಾಗ
ವಿವಿಧ ಸೇವೆಗಳನ್ನು ಮಾಡಿಸುತ್ತಾರೆ. ದೇಣಿಗೆ ನೀಡುವುದು, ಸೀರೆ ಅರ್ಪಿಸುವುದು, ಕಾಯಿ ಕಟ್ಟುವುದು, ಉಡಿ (ಮಡಿಲಕ್ಕಿ) ತುಂಬಿಸುವುದು, ಅರಿಶಿನ ಕುಂಕುಮ ಹಾಗೂ ನಾಣ್ಯಗಳನ್ನು ಶಿಖರಕ್ಕೆ ಹಾರಿಸುವುದು, ಬೆಳ್ಳಿ, ಬಂಗಾರ ತಾಮ್ರ, ಹಿತ್ತಾಳೆಯ ಆಭರಣ ನೀಡುವುದು. ದವಸ-ಧಾನ್ಯಗಳನ್ನು ದೇಣಿಗೆ ನೀಡುವುದು. ಉರುಳು ಸೇವೆ, ದೀರ್ಘ ದಂಡ ನಮಸ್ಕಾರ ಸೇವೆ ಮಾಡುವುದು, ಪಡ್ಡಲಿಗೆ ತುಂಬಿಸುವುದು ಹೀಗೆ ಮುಂತಾದ ಸೇವೆಗಳ ಮೂಲಕ ಹರಕೆಗಳನ್ನು ತೀರಿಸುತ್ತಾರೆ.
ಪಡ್ಡಲಿಗೆ ತುಂಬಿಸುವುದು-ಜೋಗತಿ
ಸಂಪ್ರದಾಯ
ಈ ಕ್ಷೇತ್ರಕ್ಕೆ ಆಗಮಿಸಿದ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಭಯ ಭಕ್ತಿಯಿಂದ ಕ್ಷೇತ್ರದಲ್ಲಿ
ಅಥವಾ ಅವರವರ ಮನೆಯಲ್ಲಿ ತಯಾರಿಸಿದ ನೈವೇದ್ಯವಾದ ಕಡುಬು, ಬದನೆಕಾಯಿ ಪಲ್ಯ, ಅನ್ನ ಸಾರು, ರೊಟ್ಟಿ ಮುಂತಾದ ಆಹಾರ ಪದಾರ್ಥಗಳನ್ನು ಗುಂಪಾಗಿ ಇಲ್ಲವೆ ಪ್ರತ್ಯೇಕವಾಗಿ ಅಮ್ಮನವರ ಪಡ್ಡಲಿಗೆಯಲ್ಲಿ ತುಂಬಿ ಜೋಗತಿಯರ ಮುಂದೆ ದೇವಿಗೆ ಅರ್ಪಿಸುತ್ತಾರೆ.
ಮಂಗಳಮುಖಿಯರು ಹೊಸ್ತಿಲ ಹುಣ್ಣಿಮೆಯಂದು
ತಮ್ಮ ಬಳೆ, ತಾಳಿ ತೆಗೆದು ವಿಧವೆಯರಾಗುವುದರಿಂದ ‘ರಂಡಿ ಹುಣ್ಣಿಮೆ’ಯಂತಲೂ ಮುಂದೆ ಮುಂದೆ ಭರತ ಹುಣ್ಣಿಮೆಗೆ ಪುನಃ ಮುತ್ತೈದಿತನ ಪಡೆಯುವದರಿಂದ
‘ಮುತ್ತೈದಿ ಹುಣ್ಣಿಮೆ’ ಎಂತಲೂ ಕರೆಯುತ್ತಾರೆ. ಮುತ್ತು ಕಟ್ಟುವ, ಪಡ್ಡಲಿಗೆ ಹೋರುವ, ಚೌಡಿಕೆ ನುಡಿಸುವ
ಜೋಗತಿಯರ ಸಂಪ್ರದಾಯವು ಇಲ್ಲಿ ಕಾಣಸಿಗುತ್ತದೆ. ಈ ಹಿಂದೆ ಇದ್ದ ದೇವದಾಸಿ ಪದ್ಧತಿಯನ್ನು ಸರ್ಕಾರವು
ಈಗ ನಿರ್ಮೂಲನೆ ಮಾಡಿದೆ.
ಈ ಜಾತ್ರೆಯು ಹೆಚ್ಚು ಜನ ಸೇರುವ ಜಾತ್ರೆಗಳಲ್ಲಿ
ಒಂದಾಗಿದ್ದು ದೂರದೂರಿನಿಂದ ಬರುವ ಭಕ್ತರು ಗುಡ್ಡದ ಸುತ್ತಲೂ ಟೆಂಟ್ ನಿರ್ಮಿಸಿ ವಸತಿ ಮಾಡುತ್ತಾರೆ.
ಮಿರ್ಚಿ-ಮಂಡಕ್ಕಿ, ಆಟಿಕೆ-ಗೊಂಬೆ, ಬೆಂಡು-ಬೆತ್ತಾಸ, ಕುಂಕುಮ-ಭಂಡಾರ ಹೀಗೆ ಹಲವು ಬಗೆಯ ವ್ಯಾಪಾರಸ್ಥರು
ಹೆಚ್ಚಿನ ಮಳಿಗೆಗಳನ್ನು ತೆರೆದಿರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಸಹಜವಾಗಿಯೇ
ಪರಿಸರವು ಮಲೀನವಾಗುತ್ತದೆ. ಭಕ್ತಾದಿಗಳಿಗಾಗಿ ನಿರ್ಮಿಸಿದ ಶೌಚಾಲಯ-ಸ್ನಾನಘಟ್ಟಗಳ ಕೊರತೆಯಿಂದಾಗಿ
ಹೆಚ್ಚಾಗಿ ಬಯಲು ಶೌಚದ ದೃಶ್ಯಗಳು ಸಾಮಾನ್ಯ. ಜಾತ್ರೆಯು ಮುಗಿದ ಬಳಿಕ ಪ್ಲಾಸ್ಟಿಕ್ ಮತ್ತು ಟೆಂಟ್ಗಳ
ಬಳಿ ಭಕ್ತರು ಸಾಕಷ್ಟು ತ್ಯಾಜ್ಯವನ್ನು ಹಾಗೆಯೇ ಬಿಡುವುದರಿಂದ ಅದನ್ನು ಶುಚಿಗೊಳಿಸಲು ತಿಂಗಳುಗಳೇ
ಬೇಕಾಗಬಹುದು. ಭಕ್ತಿಯನ್ನು ತೋರ್ಪಡಿಸುವ ಭಕ್ತರು ಸ್ವಚ್ಛತೆಯ ಬಗ್ಗೆಯೂ ಗಮನ ಹರಿಸಿದರೆ ಒಳ್ಳೆಯದು.
ಏನೇ ಇರಲಿ ಜಾತ್ರೆಯಿಂದ ಸಿಗುವ ಆ ಭಕ್ತಿ, ಸಂಭ್ರಮ, ಸಡಗರ, ಉತ್ಸಾಹ, ಹರ್ಷಕ್ಕೆ ಬೆಲೆಯುಂಟೆ..?
- ಡಾ.
ಶಿವಾನಂದ ಬ. ಟವಳಿ