ತ್ಯಾಗವೀರ ಸಿರಸಂಗಿ ಲಿಂಗರಾಜರು
ಕನ್ನಡ ನಾಡು ಕಂಡ ಅಪ್ರತಿಮ ದಾನವೀರ ಸಿರಸಂಗಿ ಲಿಂಗರಾಜ ದೇಸಾಯಿಯವರ ತ್ಯಾಗ ಮತ್ತು ಉದಾರ ಮನೋಭಾವ ಸದಾ ಸ್ಮರಣೀಯವಾದದ್ದು. ಕನ್ನಡ ನಾಡಿಗೆ ವಿಶೇಷವಾಗಿ ಲಿಂಗಾಯತ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ತಮ್ಮ ಜೀವನವನ್ನೇ ತ್ಯಾಗ ಮಾಡಿದ ದೇಸಾಯಿಯವರ ಸಂಪೂರ್ಣ ಪರಿಚಯ ನಮ್ಮ ನಾಡಿಗೆ ಆಗಬೇಕಿದೆ. ಸಿರಸಂಗಿ ಲಿಂಗರಾಜರು ಬಹಳ ಲೋಕೋಪಕಾರಿಗಳು. `ಬಡಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು. ಸರ್ವರೂ ಸಹಬಾಳ್ವೆಯಿಂದ ಸುಖ ಜೀವನ ನಡೆಸಬೇಕು’ ಎಂಬ ಉದ್ದೇಶದಿಂದ ಲಿಂಗರಾಜರು ತಮ್ಮ ಆಸ್ತಿಯನ್ನು ಸಮಾಜಕ್ಕೆ ದಾನ ಮಾಡುವ ಮೂಲಕ ನಾಡಿಗೆ ಮಾದರಿಯಾಗಿ ‘ತ್ಯಾಗವೀರ’ರೆನಿಸಿದ್ದಾರೆ.
ಆರಂಭಿಕ
ಜೀವನ
ಲಿಂಗರಾಜರು
ಜನವರಿ ೧೦, ೧೮೬೧ರಂದು ಗದಗ ಜಿಲ್ಲೆಯ ಶಿಗ್ಲಿಯ ಗೂಳಪ್ಪ ಮತ್ತು ಯಲ್ಲವ್ವ ಮಡ್ಲಿ ದಂಪತಿಗೆ ಮಗನಾಗಿ ಜನಿಸಿದರು. ಅವರ ಹುಟ್ಟಿದ ಹೆಸರು ರಾಮಪ್ಪ. ಅವರನ್ನು ನವಲಗುಂದದ ಶಿರಸಂಗಿ ದೇಸಗತಿ ಮನೆತನದ ಜಾಯಪ್ಪ ದೇಸಾಯಿಯವರು ಮತ್ತು ಅವರ ಇಬ್ಬರು ಪತ್ನಿಯರಾದ ಗಂಗಾಬಾಯಿ-ಉಮಾಬಾಯಿ ಅವರು ದತ್ತು ಪಡೆದುಕೊಂಡರು. ಸಿರಸಂಗಿ
ಸಂಸ್ಥಾನದ ಮೂಲಪುರುಷ ವಿಟ್ಟಗೌಡ. ಈತ ಒಂದನೆಯ ಇಬ್ರಾಹಿಂ
ಆದಿಲ್ ಶಹಾನ ಸೈನಿಕನಾಗಿದ್ದ. ತನ್ನ ಶೌರ್ಯ-ಸಾಹಸಗಳಿಗಾಗಿ ಆದಿಲ್ ಶಹಾನಿಂದ ಉಂಬಳಿಯಾಗಿ ಪಡೆದ ನವಲಗುಂದ ಸಂಸ್ಥಾನದ ರಾಜಧಾನಿಯೇ ಸಿರಸಂಗಿ. ಜಾಯಪ್ಪ ದೇಸಾಯಿಯವರ ಅವರ ನಂತರ ಲಿಂಗರಾಜ ಅವರು ಸಿರಸಂಗಿ, ನವಲಗುಂದ ಮತ್ತು ಸವದತ್ತಿ ಸಂಸ್ಥಾನಗಳ ಸಂಸ್ಥಾನಾಧಿಪತಿಗಳಾದರು. ಆಗ ಲಿಂಗರಾಜರಿಗೆ ಹನ್ನೆರಡು
ವಯಸ್ಸು. ಜೂನ್ ೨, ೧೮೭೨ರಂದು ಅವರ
ಹೆಸರು `ಲಿಂಗರಾಜ ದೇಸಾಯಿ’ ಎಂದು ಬದಲಾಯಿತು.
ಸಿರಸಂಗಿ
ಲಿಂಗರಾಜರ ಹಡೆದ ತಾಯಿ ಯಲ್ಲವ್ವ ಆದರೂ ಪಡೆದ ತಾಯಿ ಗಂಗಾಬಾಯಿ ಬಹಳ ಪ್ರೀತಿ-ವಾತ್ಸಲ್ಯ ತೋರುತ್ತಿದ್ದರು. ಇದೇ ಲಿಂಗರಾಜರಿಗೆ ಬದುಕಿನಲ್ಲಿ ಸಮಾಜಮುಖಿಯಾಗಿ ಬೆಳೆಯಲು ಬೆಳಕು ನೀಡಿತ್ತು. ದತ್ತು ಪಡೆದ ಇನ್ನೊಬ್ಬ ತಾಯಿ ಉಮಾಬಾಯಿಗೆ ಲಿಂಗರಾಜರನ್ನು ದತ್ತು ಸ್ವೀಕರಿಸಿದ್ದು ಇಷ್ಟವಿರಲಿಲ್ಲ. ಆದ್ದರಿಂದ ಸಿರಸಂಗಿಯಲ್ಲಿ ಇರದೇ ಸಮೀಪದ ಬೇವೂರಿನಲ್ಲಿ ಇದ್ದಳಂತೆ. ಮುಂದೆ ಗಂಗಾಬಾಯಿ ತೀರಿಕೊಂಡಾಗ ಉಮಾಬಾಯಿಯೇ ಸಂಸ್ಥಾನದ ಆಡಳಿತವನ್ನು ಕೈಗೆತ್ತಿಕೊಂಡಳು. ಆಗ ಸಂಸ್ಥಾನವು ಎರಡು
ಗುಂಪುಗಳಲ್ಲಿ ಒಡೆಯಿತು. ಒಂದು ಲಿಂಗರಾಜರಿಗೆ ನಿಷ್ಠವಾಗಿತ್ತು. ಇನ್ನೊಂದು ಉಮಾಬಾಯಿಗೆ. ಒಳಗೊಳಗೆ ಲಿಂಗರಾಜರನ್ನು ವಿರೋಧಿಸುವ ಉಮಾಬಾಯಿ ದತ್ತು ಮಗ ಲಿಂಗರಾಜ ದೇಸಾಯಿ
ಅವರನ್ನು ನೋಡಿಕೊಳ್ಳಲು ತನ್ನ ನಂಬಿಕಸ್ಥರನ್ನು ನೇಮಿಸಿದ್ದಳು.
ಅನಿವಾರ್ಯ ಕಾರಣದಿಂದಾಗಿ ಶಿಕ್ಷಣವನ್ನು ಅರ್ಧದಲ್ಲಿ ನಿಲ್ಲಿಸಿ ಕೊಲ್ಲಾಪುರದಿಂದ ಸಿರಸಂಗಿಗೆ ಮರಳಬೇಕಾಯಿತು. ವಿವಿಧ ರೀತಿಯ ಆಸ್ತಿಯ ವ್ಯಾಜ್ಯ, ಉಮಾಬಾಯಿಯ ಮೊಕದ್ದಮೆಗಳಿಂದ ಸಂಸ್ಥಾನದ ಪರಿಸ್ಥಿತಿಯು ಹದಗೆಟ್ಟಿತ್ತು. ಉಮಾಬಾಯಿ ಬಾಂಬೆ ಹೈಕೋರ್ಟ್ನಲ್ಲಿ ಆಸ್ತಿಗಾಗಿ ಮೊಕದ್ದಮೆ ಹೂಡಿದ್ದಳು. ತೀರ್ಪು ಲಿಂಗರಾಜರ ಪರವಾಗಿ ಬಂತು. ಆದರೂ ದತ್ತು ತಾಯಿಯನ್ನು ನಿರ್ಲಕ್ಷಿಸದೇ ಪ್ರತಿವರ್ಷ ೨೫೦೦೦ ರೂ. ಉತ್ಪನ್ನು ನೀಡುವ ಆಸ್ತಿಯನ್ನು ನೀಡಿದನು. ಇದು ಲಿಂಗರಾಜರ ಉದಾರ ಗುಣಕ್ಕೆ ಸಾಕ್ಷಿಯಾಗಿದೆ. ಈ ಹೊತ್ತಿಗಾಗಲೇ ಸಂಸ್ಥಾನದ ಆರ್ಥಿಕ ಪರಿಸ್ಥಿತಿಯು ಹದಗೆಟ್ಟಿತ್ತು. ದೇಶದ ಬೆನ್ನೆಲುಬು ರೈತ ಎಂಬುದನ್ನು ಮನಗೊಂಡಿದ್ದ ಲಿಂಗರಾಜರು ತಮ್ಮ ಹೊಲದಲ್ಲಿ ಕೃಷಿಯನ್ನು ಆರಂಭಿಸಿದರು. ಸಾಕಷ್ಟು ಜನ ರೈತರಿಗೆ ಕೆಲಸ ಕೊಡುವ ಮೂಲಕ ಉದ್ಯೋಗದಾತರಾದರು. ಕ್ಷಾಮಗಳು ಬಂದಾಗ ಹಲವಾರು ಕರೆ, ಆಣೆಕಟ್ಟುಗಳನ್ನು ಕಟ್ಟಿಸಿದರು. ಇವು ಭೂ ಅಭಿವೃದ್ಧಿ, ನೀರಾವರಿ ಯೋಜನೆಗಳು ಇವರ ದೂರದೃಷ್ಟಿಗೆ ಹಿಡಿದ ಕನ್ನಡಿ. ಲಿಂಗರಾಜ ದೇಸಾಯಿ ಅವರಿಗೆ ಆರು ಜನ ಮಡದಿಯರು. ಮಕ್ಕಳನ್ನು ಪಡೆದರೂ ಅವರೆಲ್ಲ ಅಕಾಲಿಕ ಮರಣ ಹೊಂದಿದರು. ಒಬ್ಬ ಪುತ್ರನೂ ಬದುಕದಿದ್ದಾಗ ಕುಟುಂಬದಿಂದ ವಿಮುಖರಾಗಿ ಸಂಸ್ಥಾನದ ಅಭಿವೃದ್ಧಿಯಲ್ಲಿ ತೊಡಗಿದರು. ಸಾಕಷ್ಟು ನೋವು-ಸಂಕಷ್ಟಗಳನ್ನು ಎದುರಿಸಿದ್ದ ಲಿಂಗರಾಜರು ಸಂಸ್ಥಾನದ ಆಸ್ತಿಯು ಸಮಾಜಮುಖಿಯಾಗಿ ಬಳಕೆಯಾಗಬೇಕು. ಸಮುಷ್ಟಿಯ ಒಳಿತಿಗೆ ಸಿರಸಂಗಿ ನವಲಗುಂದ ಟ್ರಸ್ಟ್ ಸ್ಥಾಪಿಸಬೇಕು ಎಂದು ಅವರು ತಮ್ಮ ಮರಣ ಪತ್ರದಲ್ಲಿ ಬರೆದಿದ್ದರು.
ಸಿರಸಂಗಿ
ಲಿಂಗರಾಜರ ಮೃತ್ಯುಪತ್ರ
ಸಿರಸಂಗಿ
ಲಿಂಗರಾಜರು ‘ತಾನು ಕಾಲವಾದ ಬಳಿಕ ತಮ್ಮ ಮೃತ್ಯು ಪತ್ರವನ್ನು ತೆಗೆದು ಓದಬೇಕು. ಇದಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬೇಕು’ ಎಂಬ
ಷರತ್ತು ಹಾಕಿದ್ದರು. ತಮ್ಮ ಗೆಳೆಯರಾದ ಅರಟಾಳ ರುದ್ರಗೌಡರಿಗೆ ಮಾತ್ರ ಇದನ್ನು ತಿಳಿಸಿ ಜವಾಬ್ದಾರಿ ಹೊರಿಸಿದ್ದರು. ೧೯೦೬ರಲ್ಲಿ ಬೆಳಗಾವಿಯ ಅಂದಿನ ಜಿಲ್ಲಾಧಿಕಾರಿ ಜಾಕ್ಸನ್ ಅವರು ಸಮಾಜದ ನೂರಾರು ಗಣ್ಯರ ಸಮ್ಮುಖದಲ್ಲಿ ಸಿರಸಂಗಿ ಲಿಂಗರಾಜರ ಮರಣ ಪತ್ರವನ್ನು ಓದಿದರು. ಸಂಪೂರ್ಣ ಓದಿದ ಬಳಿಕ ಜಾಕ್ಸನ್ ಅವರು “ನೂರಾರು ವರ್ಷ ಕಳೆದರೂ ಶಿರಸಂಗಿ ಲಿಂಗರಾಜರಂತಹ ದಾನಿಗಳು ಹುಟ್ಟುವುದು ವಿರಳ. ಇಂತಹ ದಾನಗುಣವನ್ನು ಹೊಂದಿರುವ ಮಹಾನ್ ವ್ಯಕ್ತಿಯನ್ನು ಹಡೆದ ತಂದೆ-ತಾಯಿ, ಪಡೆದ ಸಮಾಜವು ಶ್ರೇಷ್ಠ’ ಎಂದು ಕೊಂಡಾಡಿದರು.
ರಾವಬಹದ್ದೂರ್
ಅರಟಾಳ ರುದ್ರಗೌಡರು ಮತ್ತು ಶಿರಸಂಗಿ ಲಿಂಗರಾಜರು ಬಹಳ ಆತ್ಮೀಯ ಸ್ನೇಹಿತರು. ಅರಟಾಳ ರುದ್ರಗೌಡರು ಲಿಂಗರಾಜ ದೇಸಾಯಿಯವರ ಅಂತಿಮ ಇಚ್ಛೆಗಳನ್ನು ಮುಂದೆ ನಿಂತು ಅಕ್ಷರಶಃ ಅನುಷ್ಠಾನಕ್ಕೆ ತಂದರು. ಶಿರಸಂಗಿ ಲಿಂಗರಾಜರ ಮೃತ್ಯುಪತ್ರ ಅನುಷ್ಠಾನಕ್ಕೆ ಅರಟಾಳ ರುದ್ರಗೌಡರು ಮುಂದಾದಾಗ ತಾಯಿ ಉಮಾಬಾಯಿ ಲಿಂಗರಾಜರ ಮೃತ್ಯುಪತ್ರವನ್ನು ವಿರೋಧಿಸಿ ಅದನ್ನು ರದ್ದುಗೊಳಿಸುವಂತೆ ನ್ಯಾಯಾಲಯದ ಮುಂದೆ ಹೋದರು. ಆಗ ಅರಟಾಳ ರುದ್ರಗೌಡರು
ಇದನ್ನು ಗಂಭೀರವಾಗಿ ಪರಿಗಣಿಸಿ ಉಮಾಬಾಯಿಯವರ ವಿರುದ್ಧ ನಿಂತು ಲಿಂಗರಾಜರ ಮೃತ್ಯುಪತ್ರದ ಅನುಷ್ಠಾನಕ್ಕೆ ಪಣ ತೂಟ್ಟರು. ಈ
ಮೂಕದ್ದೆಮೆ ನಂತರ ಲಂಡನ್ನ ಪ್ರಿವಿ ಕೌನ್ಸಿಲ್
ಮುಂದೆ ಹೋದಾಗ ಅದರ ಪರವಾಗಿ ವಾದಿಸಲು ಅರಟಾಳ ರುದ್ರಗೌಡರು ಅಂದಿನ ಪ್ರಭಾವಿ ವಕೀಲರಾಗಿದ್ದ ಸರ್ ಸಿದ್ದಪ್ಪ ಕಂಬಳಿಯವರನ್ನು ಲಂಡನಿಗೆ ಕಳುಹಿಸುವ ವಿಚಾರ ಮಾಡಿದ್ದರು. ಆದರೆ ಮೊದಲ ಮಹಾಯುದ್ಧದ ಕಾರಣದಿಂದಾಗಿ ಯೂರೋಪ್ ಪ್ರವಾಸ
ಅತ್ಯಂತ ಅಪಾಯಕಾರಿ ಎಂದರಿತು ರುದ್ರಗೌಡರು ಸಿದ್ದಪ್ಪ ಕಂಬಳಿಯವರಿಗೆ ಪ್ರವಾಸ ಕೈಗೂಳ್ಳದಂತೆ ತಡೆದರು. ಮುಂದೆ ಕಾನೂನು ಪರವಾಗಿದ್ದರಿಂದ ಮೃತ್ಯು ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಿರುವಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಜಾರಿಯಾದವು.
ಸಿರಸಂಗಿ
ಲಿಂಗರಾಜ ಟ್ರಸ್ಟ್
ಸಮಾಜದ
ಸರ್ವತೋಮುಖ ಚಿಂತನೆ, ಉನ್ನತಿ ಮತ್ತು ಶಿಕ್ಷಣಾಭಿವೃದ್ಧಿಗಾಗಿ ಅವರು ಸಿರಸಂಗಿ ಲಿಂಗರಾಜ ಟ್ರಸ್ಟ್ ಸ್ಥಾಪಿಸಿದರು. ಅದು ಆರ್ಥಿಕವಾಗಿ ಫೋರ್ಡ ಫೌಂಡೇಶನ್ ಹಾಗೂ ಭಾರತೀಯ ಜ್ಞಾನಪೀಠ ದತ್ತಿ ನಿಧಿಗೆ ಸಮನಾಗಿ ನಿಲ್ಲುತ್ತದೆ. ಲಿಂಗರಾಜರ ಮೃತ್ಯುಪತ್ರದಲ್ಲಿದಂತೆ ೧೯೦೬ರ ಆಗಸ್ಟ್ ತಿಂಗಳಲ್ಲಿ ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಉನ್ನತಿ ಮತ್ತು ಶಿಕ್ಷಣಾಭಿವೃದ್ಧಿಗಾಗಿ
ನವಲಗುಂದ-ಸಿರಸAಗಿ ಟ್ರಸ್ಟ್ ಸ್ಥಾಪಿಸಲಾಯಿತು.
ಆಗ ಟ್ರಸ್ಟ್ನ ವರಮಾನ ಸುಮಾರು ಆರು ಲಕ್ಷ ರೂಪಾಯಿ ಇತ್ತು. ೧೯೩೦ ಮತ್ತು ೧೯೮೪ರ ನಡುವೆ ಈ ಟ್ರಸ್ಟ್ನಿಂದ
ಸುಮಾರು ೬,೯೨೫ ವಿದ್ಯಾರ್ಥಿಗಳು
ಪಡೆದಿದ್ದರು. ಈ ವಿದ್ಯಾರ್ಥಿಗಳಿಗೆ ಟ್ರಸ್ಟ್ ನೀಡಿದ
ಹಣಕಾಸು ನೆರವಿನ ಒಟ್ಟು ಮೌಲ್ಯ ಸುಮಾರು ೨೨,೯೮,೩೨೧-೦೦ ರೂಪಾಯಿಗಳು. ಸಿರಸಂಗಿ
ಲಿಂಗರಾಜರು ಮಾಡಿದ ಇನ್ನೊಂದು ಮಹೋನ್ನತ ಕಾರ್ಯವೆಂದರೆ ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್ಇ) ಸೊಸೈಟಿ ಸ್ಥಾಪನೆಯ
ನೆರವಾಗಿ ಐವತ್ತು ಸಾವಿರ ರೂಪಾಯಿ ನೀಡಿದರು. ಅವರ ದಾನದ ಪ್ರತಿಫಲವಾಗಿ ೧೯೧೬ರಲ್ಲಿ ಕೆಎಲ್ಇಯು ಬೆಳಗಾವಿಯಲ್ಲಿ ಆರಂಭಿಸಿದ ತನ್ನ ಮೊದಲ ಕಾಲೇಜಿಗೆ `ಸಿರಸಂಗಿ ಲಿಂಗರಾಜ ದೇಸಾಯಿ’ ಅವರ ಹೆಸರನ್ನು ಇಟ್ಟಿತು.
ಲಿಂಗರಾಜರ ತ್ಯಾಗದ ಫಲವಾಗಿ ಇಂದು ಕರ್ನಾಟಕದ ಉತ್ತರ ಭಾಗದಲ್ಲಿ ಹೆಮ್ಮರವಾಗಿ ಬೆಳೆದು ದೇಶ-ವಿದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಕೆ.ಎಲ್.ಇ ಶಿಕ್ಷಣ ಸಂಸ್ಥೆಯು ಎಲ್ಲ ವರ್ಗ, ಜಾತಿ, ಧರ್ಮದ ವಿದ್ಯಾರ್ಥಿಗಳಿಗೂ ಶಿಕ್ಷಣದ ಕೇಂದ್ರವಾಗಿದೆ. ಲಿಂಗರಾಜರ ಈ ತ್ಯಾಗವನ್ನು ಮಾಡದೇ ಹೋಗಿದ್ದರೆ ಅದೆಷ್ಟೋ ವಿದ್ಯಾರ್ಥಿಗಳು ದೂರದೂರುಗಳಿಗೆ ಹೋಗಲಾಗದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಸಿರಸಿಂಗಿ ಲಿಂಗರಾಜ ದೇಸಾಯಿವರ ಅಂದಿನ ಕೊಡುಗೆ ನಿಜಕ್ಕೂ ಸದಾಕಾಲ ಸ್ಮರಣೀಯ. ಸಿರಸಂಗಿ ಲಿಂಗರಾಜರು ಮಾಡಿದ ತ್ಯಾಗ ಗುಣಕ್ಕೆ ಟ್ರಸ್ಟ್ನ ಹಿರಿಮೆಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಬಹುದಿತ್ತೇನೋ? ಆದರೆ ಟ್ರಸ್ಟ್ ದೂರದೃಷ್ಟಿಯ ಕೊರತೆಯಿಂದಾಗಿ ವಿಫಲವಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಟ್ರಸ್ಟ್ನ ಆರಂಭದ ಕಾಲದಲ್ಲಿಯೇ ಖ್ಯಾತ ಶಿಕ್ಷಣ ತಜ್ಞರಾದ ಡಿ.ಸಿ. ಪಾವಟೆ, ರಾಜಕೀಯ ಮುತ್ಸದ್ದಿಗಳಾದ ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ರತ್ನಪ್ಪ ಕುಂಬಾರ ಮುಂತಾದವರು ಈ ಟ್ರಸ್ಟ್ನಿಂದ ಆರ್ಥಿಕ ನೆರವು ಪಡೆದ ಕೆಲವು ಗಮನಾರ್ಹ ವ್ಯಕ್ತಿಗಳಾಗಿದ್ದಾರೆ. ಈ ಟ್ರಸ್ಟ್ನ ಹಣಕಾಸಿನ ನೆರವು ಪಡೆದು ಆಕಾಶದೆತ್ತರಕ್ಕೆ ಬೆಳೆದ ಅನೇಕರು ಸಮಾಜ ವಿವಿಧ ವಲಯಗಳಿಗೆ ಕೊಡುಗೆಗಳನ್ನು ನೀಡಿದ್ದಾರೆ. ಈ ಟ್ರಸ್ಟ್ ಈಗಲೂ ಸಹ ಲಿಂಗಾಯತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಮುಂದುವರೆಸಿದೆ.
ಲಿಂಗರಾಜರ
ಮಾತಿನ ನಿಲುವು, ಯೋಜಿತ ಲಹರಿ, ಗಟ್ಟಿ ನಿರ್ಧಾರಗಳು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್
ಅಧಿಕಾರಿಗಳನ್ನೂ ಸಹ ಬೆರಗುಗೊಳಿಸುವಂತೆ ಮಾಡಿದ್ದವು. ಸಂಘಟನೆಯೇ
ಅಭಿವೃದ್ಧಿಯ ಹೆದ್ದಾರಿ ಎಂದರಿತ ಲಿಂಗರಾಜರು ಧಾರವಾಡದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಆದ್ದರಿಂದ ಅವರನ್ನು ಲಿಂಗಾಯತ ಧರ್ಮದ ಸಂಘಟನೆಯ ಪ್ರಪ್ರಥಮ ರೂವಾರಿ ಎಂದು ಕರೆಯಲಾಗಿದೆ. ಲಿಂಗರಾಜರು ೧೯೦೪-೦೫ರಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಮೊಟ್ಟಮೊದಲ ಸಮಾವೇಶದ ಅಧ್ಯಕ್ಷರಾಗಿದ್ದರು. ಸಾಮಾಜಿಕ ಕ್ರಾಂತಿಕಾರಿಗಳಾದ ಇವರು ಬಾಲ್ಯ ವಿವಾಹವನ್ನು ವಿರೋಧಿಸಿದರು. ಶಿಕ್ಷಣದ ವಿಕಾಸ, ವಿಧವಾ ವಿವಾಹಕ್ಕೆ ಬೆಂಬಲ ನೀಡಿದರು.
ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಲಿಂಗರಾಜರು ಕೈಗೊಂಡ ಯೋಜನೆಗಳು ಇಂದಿಗೂ ಪ್ರಚಲಿತವಿದ್ದು, ಕೃಷಿ ಮತ್ತು ನೀರಾವರಿ ಬಗೆಗಿನ ಕಾಳಜಿ, ರೈತರ ಪರವಾದ ನಿಲುವು, ಶಿಕ್ಷಣ ಮತ್ತು ಸಮಾಜದ ಒಲವುಗಳು ಅವರೊಳಗಿನ ಚುರುಕಿನ ಕ್ರಿಯಾಶೀಲತೆಯನ್ನು ಪ್ರದರ್ಶನಗೊಳಿಸುವಂತಹವಾಗಿದ್ದವು. ಸದಾ ಸಾಮಾಜಿಕ ಚಿಂತನೆಯಲ್ಲಿದ್ದ ಇವರು ಸಮಾಜ ಸಂಘಟನೆಗೆ ಹಲವಾರು ಯೋಜಿತ ದಾನ ದತ್ತಿಗಳನ್ನು ನೀಡಿದ್ದಲ್ಲದೇ ತಮ್ಮ ಸರ್ವಸ್ವವನ್ನು ಸಮಾಜಕ್ಕೋಸ್ಕರ ಮುಡಿಪಾಗಿಟ್ಟ ಧೀರೋದಾತ್ತರಾಗಿದ್ದರು. ಮಾತಿನ ನಿಲುವು, ಯೋಚನೆಯ ಲಹರಿ, ಗಟ್ಟಿ ನಿರ್ಧಾರಗಳು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿಗಳೂ ಸಹ ಬೆರಗುಗೊಳಿಸುವಂತೆ ಮಾಡಿದ್ದವು. ಅಖಿಲ ಭಾರತ ವೀರಶೈವ ಮಹಾಸಭೆ, ಕೆ.ಎಲ್.ಇ. ಸಂಸ್ಥೆ, ದೇವ-ದೈವ ಕಾರ್ಯ, ನೀರಾವರಿ ಯೋಜನೆ, ಭೂ ಅಭಿವೃದ್ಧಿಯಂತಹ ಕಳಕಳಿ ಕಾರ್ಯಗಳಿಗೆ ಅಪಾರ ಕೊಡುಗೆ ನೀಡಿದ ಲಿಂಗರಾಜರು ಇಂದಿಗೂ ಸ್ಮರಣೀಯ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದಾರೆ. ಈ ದಿವ್ಯ ಚೇತನ ಬದುಕಿದ್ದು ಕೇವಲ ೪೫ ವರ್ಷಗಳು ಮಾತ್ರ. ಆದರೆ ತೆಗೆದುಕೊಂಡ ನಿರ್ಣಯಗಳು ಮಾತ್ರ ಯಾವಾಗಲೂ ಶಾಶ್ವತ. ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಮಹಾನ್ ಶರಣ ಶಿರಸಂಗಿ ಲಿಂಗರಾಜರು ೧೯೦೬ರ ಜೂನ್ ೨೯ರಂದು ಲಿಂಗೈಕ್ಯರಾದರು.
ಪ್ರತಿವರ್ಷ
ಜನವರಿ ೧೦ರಂದು ಶಿರಸಂಗಿ ಲಿಂಗರಾಜರ ಜಯಂತಿ ಆಚರಿಸಲಾಗುತ್ತದೆ. ಅವರು ಮಾಡಿದ ಸತ್ಕಾರ್ಯಗಳನ್ನು ಒಂದು ದಿನ ನೆನೆದು ಮರೆಯುವುದಕ್ಕಿಂತ ಅವರ ಆದರ್ಶಗಳನ್ನು ಸಾಧ್ಯವಾದಷ್ಟು ಪಾಲಿಸೋಣ. ಶಿರಸಂಗಿ ಲಿಂಗರಾಜರ ತ್ಯಾಗದ ಬದುಕನ್ನು ಸಮಾಜಕ್ಕೆ ಪರಿಚಯಿಸೋಣ. ‘ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ’ ಎಂಬ
ಶರಣರ ನುಡಿಯಂತೆ ಬದುಕಿದ ಅವರ ಬದುಕು ಇಂದಿನ ಯುವಪೀಳಿಗೆಗೆ ದಾರಿ ದೀಪವಾಗಲಿ.
(ಜನವರಿ
೧೦ - ತ್ಯಾಗವೀರ ಸಿರಸಂಗಿ ಲಿಂಗರಾಜರ ಜನ್ಮದಿನದ ನಿಮಿತ್ತವಾಗಿ ಲೇಖನ)
- 🖊ಡಾ.
ಶಿವಾನಂದ ಬ. ಟವಳಿ
No comments:
Post a Comment