Wednesday, January 8, 2025

ಕಲಿಕಾ ಮಾಧ್ಯಮ : ಕನ್ನಡ ಭಾಷೆ

 

ಕಲಿಕಾ ಮಾಧ್ಯಮ : ಕನ್ನಡ ಭಾಷೆ


              ಭಾಷೆಯೊಂದನ್ನು, ಭಾಷಿಕ ಜನಾಂಗವೊಂದನ್ನು ಬಲಿಷ್ಠವಾಗಿಸುವ ಕ್ರಮ ಹೇಗೆ ಎಂಬ ಪ್ರಶ್ನೆ ೨೦ನೇ ಶತಮಾನದ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಜಗತ್ತಿನ ಎಲ್ಲ ಭಾಗಗಳ ಭಾಷಿಕ ಕುಲಗಳು ಬಗೆಗೆ ತಲೆ ಕೆಡಿಸಿಕೊಂಡು ಒದ್ದಾಡುತ್ತಿವೆ.” ಎಂಬುದು ವಿಮರ್ಶಕ ಡಿ. ಆರ್. ನಾಗರಾಜ್ ಅವರ ಮಾತು ಕೇವಲ ಕನ್ನಡ ಭಾಷೆಯೆಡೆಗೆ ಮಾತ್ರ ಬೆರಳು ತೋರಿಸುತ್ತಿಲ್ಲ. ಜಾಗತೀಕರಣದ ಪ್ರಭಾವದಿಂದ ಜಗತ್ತಿನ ಅನೇಕ ಭಾಷೆಗಳು ನಶಿಸಿವೆ, ನಶಿಸುವ ಹಾದಿಯಲ್ಲಿವೆ. ಜಾಗತೀಕರಣದ ಹಿನ್ನಲೆಯಲ್ಲಿ ಪ್ರಾದೇಶಿಕ ಭಾಷೆಗಳು ಮಾತ್ರವಲ್ಲ ಅನೇಕ ರಾಷ್ಟ್ರೀಯ ಭಾಷೆಗಳು ಅಳಿವಿನಂಚಿನಲ್ಲಿವೆ. ಗಡಿಬಿಡಿಯ ಬಾಳಿನಲ್ಲಿ ಜಾಗತೀಕರಣವು ಮನುಷ್ಯನನ್ನು ಬಿಗಿದಪ್ಪಿಕೊಂಡಿದೆ. ದೇಶಿಯ ಸಂಸ್ಕೃತಿಯೇ ಬತ್ತಿಹೋಗುತ್ತಿರುವ ಅಪಾಯ ಎದುರಾಗುತ್ತಿದೆ. ದೇಶಿಯ ಸಂಸ್ಕೃತಿಯ ಪ್ರತೀಕವಾದ ನಾಡು-ನುಡಿಯನ್ನು ಜಾಗತೀಕರಣದ ಭೂತ ಮುಕ್ಕುತ್ತಿದೆ. ಸಾಂಸ್ಕೃತಿಕವಾಗಿ ಕುಗ್ಗಿ ಹೋದ ಭಾಷಿಕ ಕುಲಗಳಿಗೆ ನೀರೆರೆಯುವ ಕಾರ್ಯ ನಿರಂತರವಾಗಿ ನಡೆದಿದೆ.

                             ಜಾಗತೀಕರಣದ ಹಿನ್ನಲೆಯಲ್ಲಿ ಇಂದು ಕನ್ನಡ ಭಾಷೆಯ ಸ್ಥಾನಮಾನ ಏನೆಂಬುದನ್ನು ಅಂಶಗಳನ್ನು ಪ್ರಮುಖವಾಗಿಟ್ಟು ಮುಂದೆ ಚರ್ಚಿಸಲಾಗಿದೆ. ಜೊತೆಗೆ ಕನ್ನಡ ಭಾಷಿಕರಾದ ನಾವು ನಮ್ಮ ಪ್ರಾದೇಶಿಕತೆಯ ಹಿರಿಮೆಗೆ, ದೇಶಿಯ ಸಂಸ್ಕೃತಿಯ ಅಭಿವೃದ್ಧಿಗೆ ಹಾಗೂ ಭಾಷೆಯ ಉಳಿಯುವಿಕೆಗೆ ಹೇಗೆ ಪ್ರಯತ್ನಿಸಬಹುದು ಎಂಬುದನ್ನು ತಿಳಿಸುವ ಪ್ರಯತ್ನ ಇಲ್ಲಿ ನಡೆದಿದೆ.

              ಪರಭಾಷೆಯ ಮೂಲಕದ ಶಿಕ್ಷಣ ನಮ್ಮ ಮಕ್ಕಳ ಬುದ್ಧಿಶಕ್ತಿಯನ್ನು ಬೆಂಡು ಮಾಡಿದೆ; ಅವರ ನರಗಳನ್ನು ದುರ್ಬಲಗೊಳಿಸಿದೆ; ಅವರನ್ನು ಗಿಳಿಗಳನ್ನಾಗಿ ಮಾಡಿದೆ; ಪ್ರತಿಭಾನ್ವಿತವಾದ ಸೃಷ್ಟಿಕಾರ್ಯಕ್ಕೆ ಅನರ್ಹರನ್ನಾಗಿ ಮಾಡಿದೆಎಂಬ ಗಾಂಧೀಜಿಯವರ ಅಭಿಪ್ರಾಯವು ಪ್ರಾದೇಶಿಕ ಭಾಷಾ ಶಿಕ್ಷಣವನ್ನು ಬೆಂಬಲಿಸುತ್ತದೆ. ಶಿಕ್ಷಣವು ಮಾತೃಭಾಷೆಯಲ್ಲಿಯೇ ಇರಬೇಕೆಂಬುದ ಗಾಂಧೀಜಿಯವರ ವಾದ. ಜಾಗತೀಕರಣದ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಇಂಗ್ಲಿಷ್ ಭಾಷೆಯ ಹೇರಿಕೆಯಾಯಿತು. ಅದೆಷ್ಟು ಸಮಂಜಸವಾದುದು. ಇಂಗ್ಲಿಷ್ ಭಾಷೆಯು ನಮಗೆ ಬೇಕು ನಿಜ. ಆದರೆ ಏಷ್ಟು ಬೇಕು, ಹೇಗೆ ಬೇಕು ಎನ್ನುವುದನ್ನು ಮಾತ್ರ ಯಾರೂ ಯೋಚಿಸಿಲ್ಲ. ಇಂಗ್ಲಿಷ್ ಭಾಷೆಯೊಂದರ ಹೇರಿಕೆಯಿಂದ ಎಷ್ಟೊಂದು ವಿದ್ಯಾರ್ಥಿಗಳು ಶಾಲಾ ಶಿಕ್ಷಣವನ್ನು ಮುಂದುವರಿಸದೆ ಹೋಗುತ್ತಾರೆಂಬುದನ್ನು ಗಮನಿಸಿ. ಇನ್ನು ಶಿಕ್ಷಣ ಮಾಧ್ಯಮವೇ ಇಂಗ್ಲಿಷ್ನಲ್ಲಾದರೆ ಶಿಕ್ಷಣದ ಅಪವ್ಯಯ ನಮಗೆ ತಿಳಿಯುತ್ತದೆ.

              ಹಾ. ಮಾ. ನಾಯಕರ ಅಭಿಪ್ರಾಯದಂತೆಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ನಮ್ಮ ದೇಶದ ಪ್ರಾಂತೀಯ ಭಾಷೆಗಳ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿವೆ. ಯಾವ ಯಾವ ಭಾಷೆಗೆ ಯಾವ ಯಾವ ಸ್ಥಾನವಿರಬೇಕೋಮರ್ಯಾದೆಯನ್ನು ನಾವು ಮೀರಬಾರದು. ಕರ್ನಾಟಕದಲ್ಲಿ ಕನ್ನಡದೇ ಪ್ರಥಮ, ಪ್ರಧಾನ, ರಾಜ, ರಾಣಿ, ರಾಜಕುಮಾರ ಎಲ್ಲ. ಮಿಕ್ಕ ಯಾವ ಭಾಷೆಯಾದರೂ ಇಲ್ಲಿ ಸೇವಕರ ಸ್ಥಾನದಲ್ಲಿರಬೇಕು.’’ ಬ್ರಿಟಿಷರ ಆಡಳಿತವು ನಮ್ಮನ್ನು ದೈಹಿಕವಾಗಿ, ಭಾಷಿಕವಾಗಿ ಗುಲಾಮರಾಗುವಂತೆ ಮಾಡಿತು. ದೈಹಿಕ ಗುಲಾಮತನವಳಿದರೂ ಭಾಷಿಕ ಗುಲಾಮತನವು ಹಾಗೆಯೇ ಉಳಿದಿದೆ. ಇಂಗ್ಲೀಷ್ನ್ನು ಒಂದು ಭಾಷೆಯನ್ನಾಗಿ ಕಲಿಸಿ, ಅದು ನಮಗೆ ಪ್ರಪಂಚಕ್ಕಿರುವ ಕಿಟಕಿ. ಆದರೆ ವಿಷಯಗಳನ್ನು ನಮ್ಮ ನಮ್ಮ ಭಾಷೆಯಲ್ಲಿಯೇ ಕಲಿಸಬೇಕು. ಇತ್ತೀಚೆಗೆ ಕನ್ನಡದಲ್ಲಿ ಆಗುತ್ತಿರುವ ಕೆಲಸ ಬೇರೆ ಯಾವುದೇ ಮುಂದುವರಿದ ಭಾಷೆಗಳಿಗೂ ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.

              ಇಂಗ್ಲಿಷ್ ಜೊತೆಗೆ ಹಲವು ಭಾಷೆಗಳು ನಮಗೆ ಬೇಕು. ಒಂದೊAದು ಭಾಷೆಯೂ ನಮ್ಮನ್ನು ಒಂದೊAದು ಜಗತ್ತಿಗೆ ಕರೆದೊಯ್ದು ಜ್ಞಾನವನ್ನು ನೀಡುತ್ತವೆ. ಆದರೆ ಯಾವ ಭಾಷೆ ಬೇಕು ಎನ್ನುವುದು ನಮ್ಮ ಅಗತ್ಯವನ್ನು ಅನುಸರಿಸಿದ್ದು. ಮಾತೃಭಾಷೆಯ ಹೊರತಾದ ಶಿಕ್ಷಣವು ಕುಂಡದಲ್ಲಿ ನೆಟ್ಟ ಗಿಡಗಳಂತೆ. ಬೇರು ಆಳಕ್ಕಿಳಿಯುವುದಿಲ್ಲ. ಭೂಮಿಯ ಸಾರವನ್ನು ಅವು ಗ್ರಹಿಸುವುದಿಲ್ಲ. ಹಾಕಿದ ನೀರು, ಗೊಬ್ಬರದಲ್ಲೇ ಅದು ಜೀವಮಾನವನ್ನು ಕಳೆಯಬೇಕು. ಆದ್ದರಿಂದ ಕನ್ನಡವು ಶಿಕ್ಷಣದ ಮಾಧ್ಯಮವಾದರೆ ಎಲ್ಲರೂ ಶಿಕ್ಷಿತರಾಗಬಹುದು. ದೇಶವು ಪ್ರಗತಿಪಥದತ್ತ ಸಾಗಬಹುದೆಂದು ಆಶಾವಾದ.

              ದೂರದರ್ಶನ, ಚಲನಚಿತ್ರ, ಪತ್ರಿಕೆ ಮುಂತಾದ ಸಮೂಹ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ, ಕಾರ್ಯಕ್ರಮಗಳು, ಪ್ರಕಟಗೊಳ್ಳುವ ಜಾಹೀರಾತುಗಳ ಮೇಲೆ ಜಾಗತೀಕರಣ ಪ್ರಭಾವವು ಸಾಕಷ್ಟಿದೆ. ವಿಶ್ವಕ್ಕೆ ತನ್ನನ್ನು ಪರಿಚಯಿಸಿಕೊಳ್ಳುವ ಬರದಲ್ಲಿ ಪ್ರಾದೇಶಿಕ ಭಾಷೆಗಳನ್ನು ಬದಿಗೊತ್ತಿವೆ. ಅನ್ಯ ಭಾಷೆಯ ಚಲನಚಿತ್ರಗಳನ್ನು ಡಬ್ಬಿಂಗ್ ಮಾಡುವುದು. ಅನ್ಯ ಭಾಷೆಗಳ ಲೇಖನಗಳು ಸುದ್ದಿಗಳನ್ನು ಅನುವಾದ ಮಾಡುವ ಸಂದರ್ಭದಲ್ಲಿ ದೇಶಿಯ ಪ್ರಜ್ಞೆಗೆ ಗಮನ ನೀಡಬೇಕು. ಸ್ಥಳೀಯ ಭಾಷೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕಾರ್ಯ ನಡೆಯಬೇಕು. ಪ್ರಪಂಚದ ಮುಂದುವರೆದ ರಾಷ್ಟ್ರಗಳು ಪರೋಕ್ಷವಾಗಿ ಇಂದಿಗೂ ತಮ್ಮ ಧೋರಣೆಗಳನ್ನು ಹಿಂದುಳಿದ ರಾಷ್ಟ್ತಗಳ ಮೇಲೆ ಹೇರುತ್ತಿವೆ. ಜಾಗತೀಕರಣದ ಸಂದರ್ಭದಲ್ಲಿ ನಮ್ಮ ದೇಶವು ಮಾಹಿತಿ ಸಂಗ್ರಹದ ಕ್ಷೇತ್ರವಾಗಿ ಪರಿಣಮಿಸಿದೆ. ನಮ್ಮಲ್ಲಿ ಹೊರಗಿನವರಿಗೆ ನಿಗೂಢವಾಗಿ, ವಿಕ್ಷಿಪ್ತವಾಗಿ ಕಾಣುವ ಅನೇಕ ಸಂಗತಿಗಳಿವೆ. ಅವುಗಳನ್ನು ಸಂಶೋಧನೆಗೊಳಪಡಿಸಿ ಸಿದ್ಧಮಾದರಿಗಳನ್ನಾಗಿ ತಯಾರಿಸಿ ನಮಗೆ ಮಾರುವುದರಲ್ಲಿ ನಿಸ್ಸೀಮರು. ಕನ್ನಡದ ಜನಪದ ಕಥೆಗಳಲ್ಲಿನ ಮಾಂತ್ರಿಕತೆ, ಮಾಯಾವೀ ಶಕ್ತಿಗಳ ಕಥಾರೂಪಕವು ಅಜ್ಜಿಯ ಸೃಷ್ಟಿಯಾಗಿವೆ. ಇವುಗಳನ್ನೇ ರಂಜಕಗಳನ್ನಾಗಿ  ಮಾರ್ಪಡಿಸಿ, ಕಥಾವಸ್ತುವನ್ನು ತಮ್ಮ ಸಂಸ್ಕೃತಿಗೆ ಹೊಂದುವಂತೆ ಮರುಸೃಷ್ಟಿ ಮಾಡುವ ಕಾರ್ಯವು ಬಹಳ ಹಿಂದೆಯೇ ನಡೆದಿದೆ. ಗಮನಿಸಿ ವಸಾಹತುಶಾಹೀ ರಾಷ್ಟ್ರಗಳು ಇಲ್ಲಿನ ಭೌತಿಕ ಸಂಪತ್ತನ್ನು ಮಾತ್ರ ಲೂಟಿ ಮಾಡಿಲ್ಲ. ಬೌದ್ಧಿಕ ಸಂಪತ್ತನ್ನು ಸಂಗ್ರಹಿಸಿಕೊಂಡು ಕೃತಿಯ ಮೇಲಿನ ಹಕ್ಕುಸ್ವಾಮ್ಯವನ್ನು ಪಡೆದು ನಮ್ಮನ್ನೇ ದೋಚುತ್ತಿದ್ದಾರೆ.

              ಕೇಂದ್ರ ಸರ್ಕಾರದ ಪಕ್ಷಪಾತ ಮನೋಧರ್ಮ, ರಾಜ್ಯ ಸರ್ಕಾರದ ವಿವೇಕ ಹೀನ ನಿರ್ಲಕ್ಷಗಳ ಕಾರಣದಿಂದಾಗಿ ಸ್ವಾತಂತ್ರ್ಯಾನಂತರವೂ ಪ್ರಾದೇಶಿಕ ಭಾಷೆಗಳಿಗೆ ನೈಜವೂ ನ್ಯಾಯಬದ್ಧವಾದ ಸ್ಥಾನಮಾನಗಳನ್ನು ಪಡೆಯದಿರುವುದು ದುರ್ದೈವದ ಸಂಗತಿ. ಇತ್ತೀಚಿನ ವರ್ಷಗಳಲ್ಲಿ ಕನ್ನಡಿಗರು ತಮ್ಮ ರಾಜ್ಯದಲ್ಲಿಯೇ ತಬ್ಬಲಿಗಳಾಗುತ್ತಿದ್ದಾರೆ. ವಿಶ್ವಬ್ಯಾಂಕ್ ಇಲ್ಲವೇ ಕೇಂದ್ರ ಸರ್ಕಾರದಿಂದ ಸ್ಥಾಪಿತವಾದ ಉದ್ಯಮಗಳಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗುತ್ತಿಲ್ಲ. ಒಂದು ಹಂತದವರೆಗಿನ ನೇಮಕಾತಿಯಲ್ಲಿ ಸ್ಥಳೀಯರನ್ನೇ ಪರಿಗಣಿಸಬೇಕಾದ ಅಗತ್ಯವಿದ್ದರೂ ಇಂದು ಹಾಗಾಗುತ್ತಿಲ್ಲ. ವಿದೇಶಿ ಕಂಪನಿಗಳು, ಮಲ್ಟಿಪ್ಲೆಕ್ಸ್, ಮಾಲ್ಗಳಲ್ಲಿ ದೇಶೀಯ ಸಂಸ್ಕೃತಿಯೇ ಇಲ್ಲವಾಗಿದೆ. ಕನ್ನಡ ನಾಡಿನ ಪ್ರಮುಖ ನಗರಗಳಲ್ಲಿನ ಅಂಗಡಿ ಮುಂಗಟ್ಟುಗಳ ಹೆಸರುಗಳೂ ಕೂಡ ಪರಭಾಷಾ ಮೋಹವನ್ನು ಸಾರಿ ಹೇಳುತ್ತವೆ. ಜಾಗತೀಕರಣದ ಪ್ರಭಾವದಿಂದ ಕನ್ನಡದ ಹೆಸರುಗಳೇ ಮಾಯವಾಗಿವೆ.

              ವಿಜ್ಞಾನ ತಂತ್ರಜ್ಞಾನ ಮತ್ತು ಅಂತರ್ಜಾಲದ ಬಳಕೆಯಲ್ಲಿ ಪ್ರಾದೇಶಿಕ ಭಾಷೆಗಳು ನೆರವಾಗುವುದಿಲ್ಲ ಎಂಬ ಅಪನಂಬಿಕೆಯಿಂದ ದೂರವಾಗಬೇಕಿದೆ. ಆಧುನಿಕ ವಿಜ್ಞಾನವನ್ನು ಕಲಿಯುವುದು ಕಲಿಸುವುದು ನಮ್ಮ ಭಾಷೆಗಳ ಮೂಲಕ ಸಾಧ್ಯವಾಗುವುದಿಲ್ಲ ಎನ್ನುವುದೊಂದು ಮೂಢನಂಬಿಕೆ. ಕನ್ನಡ ಮಾಧ್ಯಮದಲ್ಲಿಯೇ ಕಲಿತು ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಾದ ಉದಾಹರಣೆಗಳೂ ನಮ್ಮಲ್ಲಿವೆ. ಆದರೆ ಜನರಿಗೆ ಅನ್ಯ ಭಾಷೆಗಳ ಮೇಲೆ ಮೋಹ ಬೆಳೆಯಲು ಪ್ರತಿಷ್ಠೆಯೇ ಕಾರಣವಾಗಿದೆ.

              ಇಂದು ವಿದ್ಯಾರ್ಥಿಗಳಲ್ಲಿ ಸಂಯಮರಹಿತ ವರ್ತನೆಯೆಂದು ತಿಳಿದುಬರುತ್ತದೆ. ಅವರ ಬಹುಮಟ್ಟಿನ ಅಶಿಸ್ತಿನ ಅಜ್ಞಾನಕ್ಕೆ ಪರಭಾಷಾ ಮಾಧ್ಯಮವೇ ಕಾರಣವಾಗಿದೆ. ಜಾಗತೀಕರಣಗೊಂಡ ಹಿನ್ನಲೆಯಲ್ಲಿ ಆಹಾರ ಪದ್ಧತಿಯಲ್ಲಿಯೂ ಬದಲಾವಣೆಯಾಗಿದೆ. ದೇಸಿಯ ಆಹಾರ ಪದ್ಧತಿ ಮಾಯವಾಗಿ, ವಿದೇಶಿ ಖಾದ್ಯ, ತಿನಿಸುಗಳಿಗೆ, ದಾಸರಾಗಿರುವ ಯುವಜನತೆ ಹೆಚ್ಚಿದೆ. ಅವುಗಳಿಂದ ಯುವ ಜನಾಂಗವು ಖಿನ್ನತೆ, ಕೋಪ, ಭಯ, ತಲ್ಲಣ, ತಳಮಳ ಮತ್ತು ಆತ್ಮವಿಶ್ವಾಸವಿಲ್ಲದ ಪರಿಸ್ಥಿತಿಗೆ ಒಳಗಾಗುತ್ತಿದ್ದಾರೆ. ಅಂತಿಮವಾಗಿ ದೇಶಿಯ ಸಂಸ್ಕೃತಿಗೆ ದಕ್ಕೆ ಆಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು, ಉದ್ಯಮಗಳಿಗೆ ಕರ್ನಾಟಕ ಸರ್ಕಾರವು ನೆಲೆಕೊಟ್ಟಿದೆ ನಿಜ. ಆದರೆ ಕಂಪೆನಿಗಳು ಎಷ್ಟರಮಟ್ಟಿಗೆ ದೇಶಿಯ ಸಂಸ್ಕೃತಿಗೆ ನಿಷ್ಠವಾಗಿವೆ. ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಸಫಲವಾಗಿವೆಯೇ? ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಸಮರ್ಪಕ ಪರಿಹಾರ ದೊರಕಿದಾಗ ಮಾತ್ರ ನಾಡು-ನುಡಿ ಪರಂಪರೆಯು ಉಳಿಯಲು ಸಾಧ್ಯವಾಗುತ್ತದೆ.

              ಪ್ರಾಚೀನ ಸಂಸ್ಕೃತಿಯ ಮೇಲೆ ರೂಪಗೊಂಡ ನವೀನ ಸಂಸ್ಕೃತಿಯ ಪುಣ್ಯಭೂಮಿ ನಮ್ಮದು. ಕನ್ನಡ ಭಾಷೆಗೆ ಪ್ರಾಚೀನ ಪರಂಪರೆಯಿದೆ.  ಶಾಸ್ತ್ರೀಯ  ಭಾಷಾ ಸ್ಥಾನಮಾನವನ್ನು ಪಡೆದ ಹಿರಿಮೆ ಕನ್ನಡ ಭಾಷೆಗಿದೆ. ಎರಡು ಸಾವಿರ ವರ್ಷಗಳ ಹಿರಿಮೆ ಗರಿಮೆಗಳನ್ನು, ವೈಭವ ವಿಲಾಸಗಳನ್ನು ಮೆರೆದ ಭಾಷೆಯಿದು. ಪಂಪ, ಪೊನ್ನ, ರನ್ನ, ಜನ್ನ, ಬಸವೇಶ್ವರ, ಕುಮಾರವ್ಯಾಸ, ಹರಿಹರ, ರಾಘವಾಂಕರಿA ಕುವೆಂಪುರವರ ತನಕ ಮಹಾಕವಿಗಳ ಮೆರವಣಿಗೆಯೇ ಎದೆಯುಬ್ಬಿಸುವಂತಿದೆ. ನಮ್ಮ ಹಿರಿಯರನೇಕರು ಕನ್ನಡ ನಾಡು, ಕನ್ನಡ ನುಡಿಯನ್ನು ಕಟ್ಟಿ-ಬೆಳೆಸಿದ್ದಾರೆ. ಕಟ್ಟಿದ ನಾಡು-ನುಡಿಯನ್ನು ಉಳಿಸಿಕೊಂಡು, ಮತ್ತೆ ಕಟ್ಟುವ ಕೆಲಸವನ್ನು ಇಂದಿನವರು ಮುಂದುವರೆಸಿಕೊAಡು ಹೋಗಬೇಕಾದ ಅನಿವಾರ್ಯತೆಯಿದೆ. ಏಕೆಂದರೆ ಒಂದು ಕಾಲದಲ್ಲಿ ಇಡೀ ಭರತಖಂಡವೇ ಸಂಸ್ಕೃತ ಭಾಷೆಯನ್ನು ಒಪ್ಪಿಕೊಂಡು ಬಳಸುತ್ತಿತ್ತು. ಆದರಿಂದ ಸಂಸ್ಕೃತ ಭಾಷೆಯು ಖಿಲವಾಗಿ ಹೋಗಿದೆ. ರಾಷ್ಟç ಭಾಷೆಯಾಗಿದ್ದ ಸಂಸ್ಕೃತದ ಪರಿಸ್ಥಿತಿಯೇ ಹೀಗಿರುವಾಗ ಕನ್ನಡಿಗರೇ ಯೋಚಿಸಿ ನಮ್ಮದು ಪ್ರಾದೇಶಿಕ ಭಾಷೆ. ರಾಜ್ಯಭಾಷೆ. ನಿಮ್ಮ ಕನ್ನಡವನ್ನು ಭಾರತದ ದಕ್ಷಿಣ ಭಾಗದ ಅಂಗೈ ಅಗಲ ರಾಜ್ಯದಲ್ಲಿ ಬಿಟ್ಟರೆ ಮತ್ತೆಲ್ಲಿಯೂ ನೋಡಲಾರಿರಿ. ನಮ್ಮ ಭಾಷೆ-ಸಾಹಿತ್ಯಗಳ ಅಭಿವೃದ್ಧಿಗಾಗಿ ಕನ್ನಡ ನಾಡಿನ ಸರ್ವಾಂಗೀಣ ಬೆಳವಣಿಗೆಗಾಗಿ ನಾವೆಲ್ಲರೂ ಸಂಕಲ್ಪ ಬಲದಿಂದ ದುಡಿಯಬೇಕಾಗಿದೆ.

              ಕನ್ನಡವನ್ನು ಓದದ, ಬರೆಯದ, ಮಾತಾಡದ ಬಹುಸಂಖ್ಯಾತರಿಗೆ ನಾವು ನೆಲೆ ಕೊಟ್ಟಿದ್ದೇವೆ. ಇದರಿಂದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಹೆಸರಿನಲ್ಲಿ ಬೆಂಗಳೂರು ಕೇಂದ್ರಾಡಳಿತ ನಗರವಾಗಬೇಕೆಂಬ ಅಪಸ್ವರ ಕೇಳಿಬರುತ್ತಿದೆ. ಗುಲ್ಬರ್ಗಾ-ಬೀದರ್ನಲ್ಲಿ ಉರ್ದು, ಬೆಳಗಾವಿಯಲ್ಲಿ ಮರಾಠಿ, ಉತ್ತರ ಕನ್ನಡದಲ್ಲಿ ಕೊಂಕಣಿ, ದಕ್ಷಿಣ ಕನ್ನಡದಲ್ಲಿ ತುಳು, ಕೊಡಗಿನಲ್ಲಿ ಕೊಡವ, ಮೈಸೂರು-ಚಾಮರಾಜನಗರದಲ್ಲಿ ಮಲಯಾಳಂ, ಬೆಂಗಳೂರಿನಲ್ಲಿ ತಮಿಳು, ಬಳ್ಳಾರಿ-ರಾಯಚೂರಿನಲ್ಲಿ ತೆಲುಗು ಭಾಷೆಗಳು ಕನ್ನಡವನ್ನು ಆಕ್ರಮಿಸುವ ಕಾರ್ಯ ಮಾಡುತ್ತಿವೆ. ಮೇಲ್ಕಂಡ ಎಲ್ಲ ಜಿಲ್ಲೆಗಳನ್ನೊಳಗೊಂಡು ಮಧ್ಯಭಾಗದ ದಾವಣಗೇರಿ, ತುಮಕೂರು, ಚಿಕ್ಕಮಗಳೂರು, ಹಾವೇರಿ, ಗದಗ, ಧಾರವಾಡ ಇನ್ನುಳಿದ ಜಿಲ್ಲೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ಪ್ರಭಾವ ಸಾಕಷ್ಟಿದೆ. ಕನ್ನಡಿಗರು ಕನ್ನಡ ನಾಡಿನಲ್ಲಿಯೇ ತಬ್ಬಲಿಗಳಾದರೆ ಅವರಿಗೆ ಆಶ್ರಯವೆಲ್ಲಿದೆ? ಪ್ರತಿಯೊಬ್ಬ ಕನ್ನಡಿಗನೂ ಪ್ರತಿಯೊಂದು ಅಂಗುಲದಲ್ಲಿಯೂ ಕನ್ನಡಿಗನಾಗಬೇಕು. ಕನ್ನಡ ಭಾಷೆಗೆ ಹಾಗೂ ಕನ್ನಡಿಗರಿಗೆ ಕರ್ನಾಟಕದಲ್ಲಿ ಹಿರಿಯ ಮತ್ತು ಮೊದಲ ಮನ್ನಣೆ ತೋರಬೇಕಾದುದು ನಮ್ಮ ಧರ್ಮ.

              ಭಾಷೆ ಬೆಳೆದರೆ ಸಂಸ್ಕೃತಿಯೂ ಬೆಳೆಯುತ್ತದೆ. ಶ್ರೀಮಂತ ಭಾಷೆಯಲ್ಲಿ ಮಾತ್ರವೇ ವಿಚಾರಗಳು ಸ್ಪಂದಿಸಬಲ್ಲವು. ಸಮಾಜದ ಆರೋಗ್ಯ ಪಾಲನೆಯಲ್ಲಿ ಭಾಷೆಯದೂ ಮಹತ್ವದ ಪಾಲಿದೆ. ಸಮಾಜ ಮತ್ತು ಸರ್ಕಾರಗಳು ಸೇರಿ ಭಾಷೆಯ ರಕ್ಷಣೆ, ಸಂವರ್ಧನೆ, ಅದರ ಬಳಕೆ ಹಾಗೂ ಪ್ರಚಾರವನ್ನು ಹೆಚ್ಚಿಸುವುದಕ್ಕೆ ಕಾರ್ಯಪ್ರವೃತ್ತವಾಗಬೇಕಾಗುತ್ತದೆ. ಜಾಗತೀಕರಣಗೊಂಡ ಜಗತ್ತಿನಲ್ಲಿ ಕನ್ನಡ ಭಾಷೆಯು ಹೆಮ್ಮರವಾಗಿ ನಿಲ್ಲಬೇಕಾದರೆ ಭಾಷೆಗೆ ಪ್ರೋತ್ಸಾಹ ನೀರೆರೆಯಬೇಕಾಗುತ್ತದೆ. ಅದಕ್ಕೆ ಗಾಳಿ, ಬೆಳಕು ದೊರೆಯುವಂತಹ ವಾತಾವರಣ ಕಲ್ಪಿಸಬೇಕಾಗುತ್ತದೆ. ಅನ್ಯ ಭಾಷೆಗಳ ಆಕ್ರಮಣದಿಂದ ರಕ್ಷಣೆ ಕೊಡಬೇಕಾಗುತ್ತದೆ. ಇವೆಲ್ಲವೂ ಅನ್ವಯವಾಗುವಂತಹ ಪರಿಸ್ಥಿತಿ ಇಂದು ಕನ್ನಡ ಭಾಷೆಗೆ ಇದೆ. ಎಲ್ಲಿಯವರೆಗೆ ಕನ್ನಡ ಜನಜೀವನವನ್ನು ತುಂಬಿಕೊಳ್ಳುವುದಿಲ್ಲವೋ, ಎಲ್ಲಿಯವರೆಗೆ ಕನ್ನಡಿಗರು ಸ್ವಾಭಿಮಾನಗಳಾಗುವುದಿಲ್ಲವೋ ಅಲ್ಲಿಯವರೆಗೂ ಕನ್ನಡದ ಸಮಸ್ಯೆಗಳು ಇದ್ದೇ ಇರುತ್ತವೆ.

            ಪ್ರಾಚೀನ ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆಯು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಲಿದೆ. ಕೈಗಾರೀಕರಣ, ವಾಣಿಜ್ಯೀಕರಣ, ನಗರೀಕರಣ, ಗಣಕೀಕರಣ, ಖಾಸಗೀಕರಣ, ಜಾಗತೀಕರಣ ಮುಂತಾದವುಗಳ ಹಿನ್ನಲೆಯಲ್ಲಿ ಪ್ರಾದೇಶಿಕ ಭಾಷೆಯಾದ ಕನ್ನಡವನ್ನು ಉಳಿಸುವುದು. ವಿಜ್ಞಾನ-ತಂತ್ರಜ್ಞಾನಗಳ ದಟ್ಟ-ಪ್ರಭಾವದ ನಡುವೆ ಕಾಲದ ಅಗತ್ಯಕ್ಕೆ ತಕ್ಕಂತೆ ಬೆಳೆಸುವುದು ಒಂದು ಸವಾಲಾಗಿದೆ. ಕನ್ನಡ ಭಾಷೆಯನ್ನು ಬೆಳೆಸುವ ಗುರುತರ ಜವಾಬ್ದಾರಿ ಭಾವಿ ಜನಾಂಗದ ಮೇಲಿರುವುದರಿಂದ ಅವರು ಕನ್ನಡಕ್ಕೊದಗಿರುವ ಕುತ್ತುಗಳನ್ನು ಅರಿತುಕೊಂಡು ಪರಿಹಾರದ ದಾರಿಗಳನ್ನು ಕಂಡುಕೊಳ್ಳುವುದು ಅವಶ್ಯ. ಅವಸರದ ನಡುವೆ ಬದುಕಿಗೆ ಬೇಕಾಗಿರುವ ಮೂಲದ್ರವ್ಯವನ್ನೇ ಕಳೆದುಕೊಂಡು ಬದುಕು ಕಟ್ಟಿಕೊಳ್ಳಲು ಹೊರಟಿರುವ ಇಂದಿನ ಜನಾಂಗವುದೇಸಿಯತೆಯನ್ನಯ ಮರೆತು `ಕೊಳ್ಳುಬಾಕುಸಂಸ್ಕೃತಿಗೆ ಮಾರುಹೋಗಿರುವುದು ದುರದೃಷ್ಟಕರ ಸಂಗತಿ.

ಪರಾಮರ್ಶನಗಳು

1.     ಕನ್ನಡ ಕಟ್ಟುವ ಕೆಲಸ – ಹಾ. ಮಾ. ನಾಯಕ.

2.     ಕನ್ನಡವೇ ನನ್ನ ಧರ್ಮ – ಜಯದೇವಿ ತಾಯಿ ಲಿಗಾಡೆ

3.     ಕನ್ನಡ ಸಂವರ್ಧನೆ – ಡಿ. ಆರ್. ನಾಗರಾಜ

                                                                        🖊 ಡಾ. ಶಿವಾನಂದ . ಟವಳಿ

                                                                                                                                 

2 comments:

  1. This comment has been removed by the author.

    ReplyDelete
    Replies
    1. ತಮ್ಮ ಈ ಲೇಖನದಲ್ಲಿ ತಿಳಿಸಿರುವ ಭಾಷೆಯ ಅಳಿವು ಮತ್ತು ಉಳಿವಿನ ಅಂಶಗಳು ಮಹತ್ತರ ವಿಷಯ ವಸ್ತುಗಳನ್ನು ಓದುಗರಿಗೆ ಮನವರಿಕೆ ಮಾಡುತ್ತದೆ.

      Delete

ಚಿಂದಿ ಆಯುವ ಹುಡುಗಿ (ಕವಿತೆ )

 ಚಿಂದಿ ಆಯುವ ಹುಡುಗಿ  (ಕವಿತೆ ) ಮಂದಿ ಮಕ್ಕಳೊಳಗೆ ಚಂದಾಗಿ ಆಡುವ ವಯಸ್ಸು ಎಸೆದ ಕಸದೊಳಗೆ ಮುಳುಗಿ ಹೋಗಿದ ಮನಸ್ಸು ಮಿನುಗು ಕಂಗಳ  ತುಂಬ ಈಡೇರದ ಸಾವಿರ ಕನಸು  ಎದೆಯೊಳಗೆ...