ಚಿಂದಿ ಆಯುವ ಹುಡುಗಿ
(ಕವಿತೆ )
ಎಸೆದ ಕಸದೊಳಗೆ ಮುಳುಗಿ ಹೋಗಿದ ಮನಸ್ಸು
ಮಿನುಗು ಕಂಗಳ ತುಂಬ ಈಡೇರದ ಸಾವಿರ ಕನಸು
ಎದೆಯೊಳಗೆ ಹುದುಗಿದೆ; ಸಾಗರದಷ್ಟು ಮುನಿಸು |
ಸಮವಸ್ತ್ರಗಳ ಕಂಡಾಗ ಶಾಲೆಗೆ ಹೋಗುವ ಆಸೆ
ಕುಡುಕ ಅಪ್ಪನ ನೆನೆದಾಗ; ಮತ್ತೆ ನೋವು, ನಿರಾಸೆ
ನಿಟ್ಟಿಸಿರು ಬಿಟ್ಟು, ತಂಗಿ-ತಮ್ಮನ ಮುಖವೊರೆಸಿ
ನಡೆದಿಹಳು; ಮುಂಜಾವಲಿ, ಆಸೆಗಳಿಗೆ ಪಾಶ ತೊಡಸಿ |
ಮೊಗಕೆ ಅಲಂಕಾರವಿಲ್ಲ; ಒಡವೆಯಂತೂ ಕಂಡವಳಲ್ಲ
ವನಪು ವೈಯ್ಯಾರದಿ ಕೂದಲೆಂದೂ ಕಟ್ಟಿದವಳಲ್ಲ
ಹಸಿದ ಹೊಟ್ಟೆಗಾಗಿ ಕಸದಲಿ, ನಿತ್ಯವೂ ಹೆಕ್ಕುತ್ತಾಳೆ
ಕಳೆದ ಅವ್ವನ ನೆನಪಾಗಿ ಮತ್ತೆ ರೋಧಿಸುತ್ತಾಳೆ |
ಹರಿದ ಕುಪ್ಪುಸ-ಲಂಗವ ತೊಟ್ಟು ಮುಚ್ಚಿಹಳು ಅಂಗ
ಕಣ್ಣಲ್ಲೇ ಬೆತ್ತಲೆ ಮಾಡುವ ನೋಟಕ್ಕಾದಿತೇ ಭಂಗ?
ಎಂದು ತನಗೊದಗಿದ ಗತಿಯ ಹಳಿದು ಅರೆಗಳಿಗೆ
ಅಂದು ಮೂಕಳಾಗಿ ಹೊತ್ತು ನಡೆದಿಹಳು ಜೋಳಿಗೆ |
ಬದ್ಧ ಬದುಕಿಗೆ ಸಿಕ್ಕ ಎಳೆಗಳ ದಾರಹೊಸೆದು
ಬಿದ್ದ ಕಸದಲ್ಲಿಯೇ ತನ್ನ ಕನಸುಗಳ ಎಸೆದು
ಚಿಂದಿ ಆಯುತಿಹಳು; ಬಿಡದೇ ಬಾಗಿ ಬಾಗಿ
ಅವಳೇ ಕಪ್ಪು ಕಂಗಳ ಚಿಂದಿ ಆಯುವ ಹುಡುಗಿ |
🖊ಡಾ. ಶಿವಾನಂದ ಬ. ಟವಳಿ
No comments:
Post a Comment