Saturday, January 25, 2025

ಕನ್ನಡ ನುಡಿ (ಕವಿತೆ)

 ಕನ್ನಡ ನುಡಿ 


ಕನ್ನಡಕ್ಕಾಗಿ ಕನ್ನಡಿಗರ ತನುಮನ ಒಂದಾಗಲಿ

ಕನ್ನಡದ ವಿಶ್ವಜ್ಯೋತಿಯ ಎಲ್ಲೆಡೆ ಬೆಳಗಿಸಲಿ

ಕನ್ನಡಕ್ಕಾಗಿ ಕೈಯೆತ್ತುವ ಕಾಯಕವು ನಡೆಯಲಿ

ಕನ್ನಡದ ಕಾವ್ಯದುಂದುಭಿ ಎಲ್ಲೆಡೆ ಮೊಳಗಲಿ


ಪಂಪ, ಪೊನ್ನ, ರನ್ನರು ನಡೆದ ದಾರಿಯಲಿ

ಹಾಡುತ ನಲಿಯುತ ನಡೆಯುವ ಸೊಗಸಲಿ

ಕುವೆಂಪು, ಬೇಂದ್ರೆ, ಮಾಸ್ತಿಯರ ನೆನಪಲಿ

ಕನ್ನಡ ಕಾವ್ಯದ ಸೊಬಗು ಎಲ್ಲೆಡೆ ಹರಡಲಿ


ಕರುನಾಡ ಮಕ್ಕಳೆಲ್ಲ ಕನ್ನಡನುಡಿ ಕಲಿಯಲಿ

ಕರುನಾಡ ತಾಯಿ ಋಣ ಮುದದಿ ತೀರಿಸಲಿ 

ಕವಿ-ಕಾವ್ಯ ಕಮ್ಮಟ-ಸಮ್ಮೇಳನಗಳು ನಡೆಯಲಿ

ಕರುನಾಡ ಕುವರರೆಲ್ಲ ಜಾಗೃತಿ ಮೂಡಿಸಲಿ


ಕುಡಿಯುವ ನೀರು ಕಾವೇರಿಯದು ಅರಿಯಲಿ

ಉಣ್ಣುವನ್ನ ಕರುನಾಡ ಮಣ್ಣಿನದು ತಿಳಿಯಲಿ

ಕನ್ನಡದ ಏಳಿಗೆಗೆ ಎಲ್ಲರೊಂದಾಗಿ ಶ್ರಮಿಸಲಿ

ಕನ್ನಡ ನುಡಿ ಗೆಲ್ಲಲಿ, ಕನ್ನಡ ನುಡಿ ಬಾಳಲಿ


                                                - ಡಾ. ಶಿವಾನಂದ ಟವಳಿ

No comments:

Post a Comment

ಸವದತ್ತಿ ಎಲ್ಲಮ್ಮನ ಜಾತ್ರೆಗೆ ಎಲ್ಲಿಲ್ಲದ ಸಡಗರ

  ಎಲ್ಲಮ್ಮನ ಜಾತ್ರೆಗೆ ಎಲ್ಲಿಲ್ಲದ ಸಡಗರ ಸವದತ್ತಿಯ ರೇಣುಕಾ ದೇವಿ ದೇವಸ್ಥಾನವು ನಾಡಿನ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳ. ಪ್ರತೀ ಹುಣ್ಣಿಮೆಯಂದು ಎಲ್ಲಮ್ಮನ ಆರಾಧನೆ ಜ...